March 13, 2026
WhatsApp Image 2026-03-13 at 9.02.23 AM

ಬಂಟ್ವಾಳ : ಶಾಲೆಯಲ್ಲಿ ಓದುತ್ತಿದ್ದ ವೇಳೆ ವಿದ್ಯಾರ್ಥಿಯ ಕೈಯಿಂದ ಕುರಾನ್ ಪುಸ್ತಕ ಕಸಿದು ನೆಲಕ್ಕೆ ಎಸೆದು ನಿಂದನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಗಣಿತ ಶಿಕ್ಷಕರ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ಬಿ. ಮೂಡ ಗ್ರಾಮದ ತಲಪಾಡಿ ಡೈಮಂಡ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ನಡೆದಿದೆ.

ದೂರುದಾರನಾದ 11 ವರ್ಷದ ಅಪ್ರಾಪ್ತ ಬಾಲಕನು ತಲಪಾಡಿ ಡೈಮಂಡ್ ಇಂಟರ್‌ನ್ಯಾಷನಲ್ ಶಾಲೆಯ 6ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಫೆಬ್ರವರಿ 19ರಂದು ಬೆಳಿಗ್ಗೆ 10.30ರಿಂದ 11.30ರ ನಡುವೆ ವಿರಾಮದ ಸಮಯದಲ್ಲಿ ತನ್ನ ಬ್ಯಾಗ್‌ನಲ್ಲಿದ್ದ ಕುರಾನ್ ಪುಸ್ತಕವನ್ನು ತೆಗೆದು ಓದುತ್ತಿದ್ದನು ಎನ್ನಲಾಗಿದೆ. ಈ ವೇಳೆ ಅದೇ ಶಾಲೆಯ ಗಣಿತ ಶಿಕ್ಷಕರಾದ ಮೋಹನ್ ಅವರು ತರಗತಿ ಕೊಠಡಿಗೆ ಬಂದು ಬಾಲಕನ ಕೈಯಲ್ಲಿದ್ದ ಕುರಾನ್ ಪುಸ್ತಕವನ್ನು ಎಳೆದು ನೆಲಕ್ಕೆ ಎಸೆದು ನಿಂದನೆ ಮಾಡಿ ಮಾನಸಿಕ ಹಿಂಸೆ ನೀಡಿದ್ದು, ಹೊಡೆಯಲು ಯತ್ನಿಸಿ ತರಗತಿಯಿಂದ ಹೊರಗೆ ಹಾಕಲು ಪ್ರಯತ್ನಿಸಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಘಟನೆ ಬಳಿಕ ಬಾಲಕ ಮನೆಗೆ ಹೋಗಿ ತನ್ನ ತಂದೆಗೆ ವಿಷಯವನ್ನು ತಿಳಿಸಿದ್ದಾನೆ. ಅದರಂತೆ ದೂರುದಾರರು ಫೆಬ್ರವರಿ 20ರಂದು ಬೆಳಿಗ್ಗೆ ಶಾಲೆಗೆ ತೆರಳಿ ಪ್ರಾಂಶುಪಾಲರೊಂದಿಗೆ ವಿಚಾರ ಚರ್ಚಿಸಲು ಹೋಗಿದ್ದು, ಆ ವೇಳೆ ಶಾಲೆಯ ಚೇರ್‌ಮನ್ ಸನಾ ಅವರಿಗೂ ನಡೆದ ಘಟನೆ ವಿವರಿಸಿದ್ದಾರೆ ಎನ್ನಲಾಗಿದೆ.ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಘಟನೆ ನಡೆದಿರುವುದು ಗೋಚರಿಸಿದೆ ಎಂದು ಹೇಳಲಾಗಿದೆ. ಆದರೂ ಶಿಕ್ಷಕರನ್ನು ವಿಚಾರಿಸುವ ಬದಲು ದೂರುದಾರರನ್ನೇ ಗದರಿಸಿ, ಇಂತಹ ವಿಷಯಗಳನ್ನು ಮುಂದುವರೆಸಿದರೆ ಬಾಲಕನನ್ನು ಶಾಲೆಯಿಂದ ಅಮಾನತು ಮಾಡುವುದಾಗಿ ಚೇರ್‌ಮನ್ ಬೆದರಿಕೆ ಹಾಕಿದರೆಂದು ದೂರಿನಲ್ಲಿ ಆರೋಪಿಸಲಾಗಿದೆ.

ಅಲ್ಲದೆ ಈ ಘಟನೆಯನ್ನು ಸಮರ್ಥಿಸುವ ವಿದ್ಯಾರ್ಥಿಗಳು ಅಥವಾ ಅವರ ಪೋಷಕರು ಸಾಕ್ಷಿ ನೀಡಿದರೂ ಅವರನ್ನು ಸಹ ಶಾಲೆಯಿಂದ ಅಮಾನತು ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಹೇಳಲಾಗಿದೆ.

ಈ ಘಟನೆಯಿಂದ ಬಾಲಕನಿಗೆ ದೈಹಿಕ ಹಾಗೂ ಮಾನಸಿಕ ತೊಂದರೆ ಉಂಟಾಗಿದ್ದು, ಧಾರ್ಮಿಕ ಭಾವನೆಗೂ ಧಕ್ಕೆ ಉಂಟಾಗಿದೆ ಎಂದು ದೂರುದಾರರು ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಪೊಲೀಸರಿಗೆ ನೀಡಿದ ದೂರಿನ ಆಧಾರದ ಮೇಲೆ ಪ್ರಾಥಮಿಕ ತನಿಖೆ ನಡೆಸಿದ ಬಳಿಕ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ತಿಳಿದುಬಂದಿದೆ.

About The Author

Leave a Reply