

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮಸೀದಿ ಮತ್ತು ದೇವಸ್ಥಾನಗಳ ಮುಖ್ಯಸ್ಥರು, ಸಾಮಾಜಿಕ ಹಾಗೂ ರಾಜಕೀಯ ಮುಖಂಡರ ಸಮ್ಮುಖದಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಯಿತು. ಮುಂಬರುವ ರಂಜಾನ್ ಹಾಗೂ ಯುಗಾದಿ ಹಬ್ಬಗಳ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎರಡು ಸಮುದಾಯದ ನಾಯಕರು ಪರಸ್ಪರ ಸಹಕಾರದೊಂದಿಗೆ ಶಾಂತಿ ಕಾಪಾಡಿಕೊಳ್ಳುವಂತೆ ಪೊಲೀಸ್ ಸಭ್ ಇನ್ಸ್ ಪೆಕ್ಟರ್ ರಾಮಕೃಷ್ಣ ಇಲಾಖೆಯ ಮೂಲಕ ಸಾರ್ವಜನಿಕರಿಗೆ ಮನವಿ ಮಾಡಿದರು.
ಸಭೆಯಲ್ಲಿ ಮಾತನಾಡಿದ ವಿಟ್ಲ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಾಮಕೃಷ್ಣ ಅವರು, ಹಬ್ಬದ ಸಂದರ್ಭದಲ್ಲಿ ಮಸೀದಿಗಳಲ್ಲಿ ಕಾರ್ಯಕ್ರಮಗಳು ನಡೆಯುವಾಗ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಜಾಗರೂಕತೆ ವಹಿಸಬೇಕು ಎಂದು ತಿಳಿಸಿದರು. ಎರಡೂ ಸಮುದಾಯದ ಮುಖಂಡರು ಸಹ ಶಾಂತಿ ಮತ್ತು ಸಹೋದರತ್ವವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಹೊಂದಿದ್ದಾರೆ ಎಂದು ಹೇಳಿದರು.


ಅಪ್ರಾಪ್ತರಿಗೆ ವಾಹನ ನೀಡಬೇಡಿ
ಹಬ್ಬದ ದಿನಗಳಲ್ಲಿ ಅಪಘಾತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ನೀಡಬಾರದು ಎಂದು ಪೊಲೀಸರು ಸಾರ್ವಜನಿಕರಿಗೆ ಸೂಚನೆ ನೀಡಿದರು. ಯುವಕರ ಸುರಕ್ಷತೆ ಮತ್ತು ಸಾರ್ವಜನಿಕ ಶಾಂತಿಯ ದೃಷ್ಟಿಯಿಂದ ಈ ನಿಯಮ ಪಾಲನೆ ಅಗತ್ಯವಿದೆ ಎಂದು ಹೇಳಿದರು.
ಇತ್ತೀಚೆಗೆ ಗಾಂಜಾ ಜಾಲದ ಚಟುವಟಿಕೆಗಳು ಕೆಲವೆಡೆ ಹೆಚ್ಚುತ್ತಿರುವ ಹಿನ್ನೆಲೆ, ಸಾರ್ವಜನಿಕರು ಯಾವುದೇ ಸಂಶಯಾಸ್ಪದ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸಭೆಯಲ್ಲಿ ಮನವಿ ಮಾಡಲಾಯಿತು. ಮಾಹಿತಿ ನೀಡಿದವರ ವಿವರಗಳನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.
ಗ್ಯಾಸ್ ಬುಕ್ಕಿಂಗ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವಂಚಕರ ಜಾಲದ ಬಗ್ಗೆ ಸಭೆಯಲ್ಲಿ ಎಚ್ಚರಿಕೆ ನೀಡಲಾಯಿತು. ಅಪರಿಚಿತ ಕರೆಗಳು ಅಥವಾ ಸಂದೇಶಗಳ ಮೂಲಕ ಹಣ ಕೇಳುವವರ ಬಗ್ಗೆ ಜಾಗರೂಕರಾಗಿರಬೇಕು ಎಂದು ಸಾರ್ವಜನಿಕರಿಗೆ ಸಲಹೆ ನೀಡಲಾಯಿತು.
ಸೈಬರ್ ವಂಚನೆ ಬಗ್ಗೆ ಜಾಗೃತಿ
ಎಪಿಕೆ ಫೈಲ್‌ಗಳನ್ನು (APK File) ಕಳುಹಿಸಿ ಹಾಗೂ ಓಟಿಪಿ (OTP) ಕೇಳುವ ಮೂಲಕ ನಡೆಯುತ್ತಿರುವ ಸೈಬರ್ ವಂಚನೆಗಳ ಬಗ್ಗೆ ಜನರಿಗೆ ಎಚ್ಚರಿಕೆ ನೀಡಲಾಯಿತು. ಇಂತಹ ಕರೆಗಳು ಅಥವಾ ಸಂದೇಶಗಳಿಗೆ ಪ್ರತಿಕ್ರಿಯಿಸದೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಯಿತು.
ವಿಟ್ಲ ಪಟ್ಟಣದ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಸಭೆಯಲ್ಲಿ ಮುಖಂಡರು ಮನವಿ ಸಲ್ಲಿಸಿದರು. ಜೊತೆಗೆ ವಿಟ್ಲ, ಕನ್ಯಾನ ಮತ್ತು ಬೈರಿಕಟ್ಟೆ ಭಾಗಗಳಲ್ಲಿ ಮಣ್ಣಿನ ಲಾರಿಗಳು ಟರ್ಪಲ್ ಇಲ್ಲದೆ ಸಂಚರಿಸುತ್ತಿರುವುದರಿಂದ ಸಣ್ಣ ವಾಹನ ಚಾಲಕರಿಗೆ ಧೂಳು ಸಮಸ್ಯೆ ಉಂಟಾಗುತ್ತಿದೆ ಎಂದು ತಿಳಿಸಿ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಕೇಳಿಬಂತು.
ಸಭೆಯ ಅಂತ್ಯದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ರಾಮಕೃಷ್ಣ ಅವರು ಮುಂಬರುವ ರಂಜಾನ್ ಹಾಗೂ ಯುಗಾದಿ ಹಬ್ಬಗಳಿಗೆ ಮುಂಗಡ ಶುಭಾಶಯ ಕೋರಿದರು. ಸಭೆಯಲ್ಲಿ ಭಾಗವಹಿಸಿದ ಎರಡು ಸಮುದಾಯದ ಮುಖಂಡರು ಮತ್ತು ಸಾರ್ವಜನಿಕರಿಗೆ ಧನ್ಯವಾದ ತಿಳಿಸಿದರು.






