

ಬೆಂಗಳೂರು: ಪ್ರ್ಯಾಂಕ್ ಮಾಡೋಕೆ ಜೀವಂತ ವ್ಯಕ್ತಿಯನ್ನು ಚೀಲದಲ್ಲಿ ತುಂಬಿಸಿ, ಮಂಗಳೂರಿಗೆ ಕೊರಿಯರ್ ಮೂಲಕ ಪಾರ್ಸೆಲ್ ಮಾಡಲು ಬಂದಿರುವ ಘಟನೆ ವೈಯಾಲಿಕಾವಲ್‌ನಲ್ಲಿ ನಡೆದಿದೆ.
ನಿನ್ನೆ ಸಂಜೆ 4:30ರ ಸುಮಾರಿಗೆ ಬಿಳಿಬಣ್ಣದ ಮೂಟೆಯೊಂದಿಗೆ ನಾಲ್ವರು ವೈಯಾಲಿಕಾವಲ್‌ನಲ್ಲಿರುವ ಕೊರಿಯರ್ ಆಫೀಸ್‌ಗೆ ಬಂದಿದ್ದರು. ಇದನ್ನು ಮಂಗಳೂರಿಗೆ ಕಳುಹಿಸಬೇಕೆಂದು ಕೊರಿಯರ್ ಸಿಬ್ಬಂದಿಗೆ ಹೇಳಿದ್ದಾರೆ. ಮೂಟೆ ಅಲುಗಾಡ್ತಿರೋದು ನೋಡಿ ಕೊರಿಯರ್ ಕಚೇರಿಯಲ್ಲಿದ್ದ ಇಬ್ಬರು ಮಹಿಳಾ ಸಿಬ್ಬಂದಿ ಗಾಬರಿಯಾಗಿದ್ದಾರೆ. ಮೂಟೆಯನ್ನ ಓಪನ್ ಮಾಡಿದಾಗ ವೃದ್ದನೊಬ್ಬ ಮೂಟೆಯಿಂದ ಎದ್ದು ಹೊರನಡೆದಿದ್ದಾನೆ.

ವೃದ್ಧ ಹೊರನಡೆಯುತ್ತಿದ್ದಂತೆ ಕೊರಿಯರ್ ಪಾರ್ಸೆಲ್ ಮಾಡಲು ಬಂದಿದ್ದ ಇಬ್ಬರು ಮಹಿಳೆಯರು, ಪುರುಷರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಮೂಟೆಯಲ್ಲಿದ್ದ ವ್ಯಕ್ತಿಗೆ ಮಾತನಾಡಲು ಕೂಡ ಬರುತ್ತಿರಲಿಲ್ಲ. ಈ ಬಗ್ಗೆ ಕೊರಿಯರ್ ಆಫೀಸ್‌ನ ಸಿಬ್ಬಂದಿ ಭಯಪಟ್ಟಿದ್ದು, ವೈಯಾಲಿಕಾವಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಐವರನ್ನು ಕರೆಸಿ ವಿಚಾರಣೆ ನಡೆಸಿದಾಗ ಒಂದೇ ಕುಟುಂಬದವರು ಸೇರಿಕೊಂಡು ಪ್ರ್ಯಾಂಕ್ ಮಾಡಿರುವುದು ಗೊತ್ತಾಗಿದೆ. ಯುಗಾದಿ ಮತ್ತು ರಂಜನ್ ಹಬ್ಬ ಒಟ್ಟಿಗೆ ಬಂದಿದೆ. ಹೀಗಾಗಿ ಬಸ್‌ನಲ್ಲಿ ಸೀಟ್ ಸಿಗಲ್ಲ ಅನ್ನೋ ಕಾರಣಕ್ಕೆ ವ್ಯಕ್ತಿಯನ್ನು ಪಾರ್ಸೆಲ್ ಮಾಡುವ ವಿಷಯ ಇಟ್ಟುಕೊಂಡು ವಿಡಿಯೋ ಮಾಡಲು ಈ ರೀತಿ ಮಾಡಿದ್ದಾಗಿ ಪೊಲೀಸರ ಬಳಿ ಒಪ್ಪಿಕೊಂಡಿದ್ದಾರೆ. ಅದಕ್ಕೆ ಪೊಲೀಸರು ಈ ರೀತಿ ಒಬ್ಬ ವ್ಯಕ್ತಿಯನ್ನ ಚೀಲದಲ್ಲಿ ತರೋದು ತಪ್ಪು ಅನ್ನೋದು ಗೊತ್ತಿಲ್ವಾ? ನಿಮ್ಮ ಹುಡುಗಾಟಕ್ಕೆ ಚೀಲದಲ್ಲಿದ್ದ ವ್ಯಕ್ತಿ ಉಸಿರುಗಟ್ಟಿ ಸತ್ತಿದ್ರೆ, ಇಲ್ಲ ಆರೋಗ್ಯ ಸಮಸ್ಯೆ ಆಗಿದ್ರೇ ಯಾರು ಹೊಣೆ? ಒಂದು ವೇಳೆ ಕೊರಿಯರ್ ಕಚೇರಿಯ ಸಿಬ್ಬಂದಿಗೆ ಏನಾದರೂ ಆಗಿದ್ರೇ ಯಾರು ಹೊಣೆ? ರೀಲ್ಸ್‌ಗಾಗಿ ಈ ರೀತಿ ಹುಡುಕಾಟ ಮಾಡೋದು ಸರಿನಾ? ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ.






