March 19, 2026
WhatsApp Image 2026-03-19 at 10.21.16 AM (1)

ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ವಾರ್ಡ್ 8ರ ಮಂಚಿ ನೂಜಿಬೈಲ್‌ನ ಕಟ್ಟಪುಣಿ ಪ್ರದೇಶದಲ್ಲಿ, ಜಮಾಅತೆ ಇಸ್ಲಾಮಿ ಹಿಂದ್‌, ಸಮಾಜಸೇವಾ ಘಟಕದ ವತಿಯಿಂದ ನೂತನ ಸಾರ್ವಜನಿಕ ಕೊಳವೆ ಬಾವಿಯ ಹಸ್ತಾಂತರ ಕಾರ್ಯಕ್ರಮ 18/03/2026 ರಂದು ಸರಳವಾಗಿ ನಡೆಯಿತು. ಸ್ಥಳೀಯ ಜನರ ಬಹುಕಾಲದ ನೀರಿನ ಅವಶ್ಯಕತೆಯನ್ನು ಮನಗಂಡು ಈ ಸೇವಾ ಕಾರ್ಯ ಕೈಗೊಳ್ಳಲಾಗಿದ್ದು, ಕಾರ್ಯಕ್ರಮವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

ಈ ಪ್ರದೇಶದಲ್ಲಿ 20 ಕ್ಕಿಂತ ಹೆಚ್ಚು ಕುಟುಂಬಗಳು ಕುಡಿಯುವ ನೀರಿನ ಸಮಸ್ಯೆಯಿಂದ ಸಂಕಷ್ಟ ಅನುಭವಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ ನಾಗರೀಕರ ಬೇಡಿಕೆಗೆ ಗ್ರಾಮ ಪಂಚಾಯತ್ ಮನವಿಗೆ ಸಾಮಾಜಿಕ ಕಾರ್ಯಕರ್ತ ಹಸೈನಾರ್ ತಾಳಿತ್ತನೂಜಿಯವರ ಮೂಲಕ ಸ್ಪಂದಿಸಿದ ಜಮಾಅತೆ ಇಸ್ಲಾಮಿ ಹಿಂದ್‌, ಸಮಾಜಸೇವಾ ಘಟಕವು ತಕ್ಷಣ ಕಾರ್ಯಪ್ರವೃತ್ತವಾಗಿ, ಸ್ಥಳೀಯ ನಾಗರೀಕರ ಕುಡಿಯುವ ನೀರಿನ ಅಗತ್ಯವನ್ನು ಪೂರೈಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಇದರ ಮೂಲಕ ಸಮಾಜಮುಖಿ ಸೇವೆಯ ಸಾರ್ಥಕತೆಯನ್ನು ಮತ್ತೊಮ್ಮೆ ತೋರಿಸಿದೆ.

ನೂತನ ಸಾರ್ವಜನಿಕ ಕೊಳವೆ ಬಾವಿಯನ್ನು ಜಮಾಅತೆ ಇಸ್ಲಾಮಿ ಪಾಣೆಮಂಗಳೂರು ಅದ್ಯಕ್ಷರಾದ ಮುಖ್ತಾರ್ ಅಹ್ಮದ್ ಅವರು ಉದ್ಘಾಟಿಸಿ ಗ್ರಾಮ ಪಂಚಾಯತಿಗೆ ಹಸ್ತಾಂತರಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಅವರು, “ನೀರಿನ ಅಭಾವ ನಿವಾರಣೆಗೆ ದಾನಿಯೊಬ್ಬರು ನೀಡಿದ ಕೊಡುಗೆ ಶ್ಲಾಘನೀಯವಾಗಿದೆ. ದಾನದಲ್ಲಿ ದೇವನ ಸಂತೃಪ್ತಿ ಮಾತ್ರ ಮುಖ್ಯ; ಜಾತಿ, ಮತ ಭೇದವಿಲ್ಲದೆ ನೀರು ಮನುಷ್ಯನ ಮೂಲಭೂತ ಹಕ್ಕು. ಆದ್ದರಿಂದ, ಈ ಅಮೂಲ್ಯ ಸಂಪತ್ತನ್ನು ವ್ಯರ್ಥ ಮಾಡದೆ ಎಲ್ಲರೂ ಜವಾಬ್ದಾರಿಯಿಂದ ಬಳಸಬೇಕು,” ಎಂದು ಹಿತವಚನ ಹೇಳಿದರು. ದಾನಿಗಳಿಗೆ ದೇವನು ಹೆಚ್ಚಿನ ಅನುಗ್ರಹವನ್ನು ನೀಡಲಿ ಎಂದು ಪ್ರಾರ್ಥಿಸಿದರು.

ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರು, “ಪ್ರಸ್ತುತ ಗ್ರಾಮ ಪಂಚಾಯತಿಗೆ ಅನುದಾನದ ಕೊರತೆ ಇದ್ದರೂ, ನೀರಿನ ಸಮಸ್ಯೆಗೆ ಸ್ಪಂದಿಸಿದ ಜಮಾಅತೆ ಇಸ್ಲಾಮಿ ಸಮಾಜಸೇವಾ ಘಟಕದ ಸೇವೆ ಶ್ಲಾಘನೀಯವಾಗಿದೆ. ಜೆ.ಐ.ಎಚ್. ಸಮಾಜಸೇವಾ ಘಟಕ ಸೇರಿದಂತೆ ಹಲವಾರು ಸಮಾಜಮುಖಿ ಸಂಘಟನೆಗಳು ನಮ್ಮ ಗ್ರಾಮ ಪಂಚಾಯತಿನ ಅಭಿವೃದ್ಧಿಗೆ ಸದಾ ಕೈಜೋಡಿಸುತ್ತಿವೆ,” ಎಂದು ಕೃತಜ್ಞತಾಭಾವದಿಂದ ಅಭಿಪ್ರಾಯಪಟ್ಟರು

ನಂತರ ಕೊಳ್ನಾಡು ಗ್ರಾಮ ಅದ್ಯಕ್ಷರಾದ ಅಶ್ರಪ್ ಕೆ ಸಾಲೆತ್ತೂರು, ಸಾಮಾಜಿಕ ಕಾರ್ಯಕರ್ತ ಹಸೈನಾರ್ ತಾಳಿತ್ತನೂಜಿ, ಪತ್ರಕರ್ತ ವಿ.ಟಿ.ಪ್ರಸಾದ್ ಸಾರ್ವಜನಿಕ ಮೂಲಭೂತ ಸೌಕರ್ಯ,ಜೀವ ಕಾರುಣ್ಯದಂತಹ ನಿರಂತರ ಸೇವೆಗೆ ಸಮಾಜಸೇವಾ ಘಟಕದ ಸೇವಾ ಕಾರ್ಯವನ್ನು ಪ್ರಶಂಸಿಸಿ ಶುಭ ಹಾರೈಕೆಯ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಕೊಳ್ನಾಡು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಶ್ರೀಮತಿ ಜಯಂತಿ ಎಸ್.ಪೂಜಾರಿ,ಶ್ರೀಮತಿ ಸವಿತಾ ಬರ್ಕಳ,ಸುಲೋಚನಾ ರೈ,ಮಹಮ್ಮದ್ ಕಟ್ಟೆ,ಜಗದೀಶ್ ರೈ ನೂಜಿಬೈಲ್,ಸಾಮಾಜಿಕ ಮುಖಂಡ ಸೋಮಶೇಖರ ಗೌಡ ತಾಳಿತ್ತನೂಜಿ,ಜಮಾಅತೆ ಇಸ್ಲಾಮಿ ಹಿಂದ್ ಪ್ರಮುಖರಾದ ಸಿ.ಕಾಸೀಂ ಆದಮ್‌ ಇಸ್ಮಾಯಿಲ್ ಹಾಗೂ ನೀರಿನ ಪಲಾನುಭವಿಗಳು ಉಪಸ್ಥಿತರಿದ್ದರು.

About The Author

Leave a Reply