

ಕರಾವಳಿ ಜಿಲ್ಲೆಗಳಲ್ಲಿ (ಗುರುವಾರ ರಾತ್ರಿ) ಚಂದ್ರನ ದರ್ಶನವಾಗಿರುವುದರಿಂದ ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಶುಕ್ರವಾರ ಈದುಲ್ ಫಿತರ್ ಆಚರಿಸಲಿದ್ದಾರೆ. ಈ ಬಗ್ಗೆ ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ತಿಳಿಸಿದ್ದಾರೆ.

ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ಶವ್ವಾಲ್ ತಿಂಗಳ ಚಂದ್ರ ದರ್ಶನವಾದ ಖಚಿತ ಮಾಹಿತಿ ದೊರೆತ ಕಾರಣ ಶುಕ್ರವಾರ (20/03/2026) ಈದುಲ್ ಫಿತ್ರ್ ಆಗಿರುತ್ತದೆ ಎಂದು ಸಲಫಿ ಹಿಲಾಲ್ ಕಮಿಟಿ, ಮಂಗಳೂರು ಪ್ರಕಟಣೆಯಲ್ಲಿ ತಿಳಿಸಿದೆ.. ಈದುಲ್ ಫಿತರ್ ಹಬ್ಬದ ಶುಭಾಶಯ ತಿಳಿಸಿದ ಉಡುಪಿಯ ಖಾಝಿ ಝೈನುಲ್ ಉಲಮಾ ಖಾಝಿ ಎಮ್. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉಸ್ತಾದ್ ಅವರು, ʼರಮಝಾನ್ ತಿಂಗಳ ಪರ್ಯಂತ ಪಾಲಿಸಿದ ಶಿಸ್ತು, ಸಂಯಮ ಹಾಗೂ ಪ್ರಾರ್ಥನೆಗಳು ಜೀವನಪೂರ್ತಿ ಮುಂದುವರಿಯಬೇಕು. ಹಸಿದವರಿಗೆ ಆಹಾರ ನೀಡುವುದು ಮತ್ತು ಬಡವರ ಕಣ್ಣೀರು ಒರೆಸುವುದು ಈದ್ ಹಬ್ಬದ ಪ್ರಮುಖ ಉದ್ದೇಶ ಆಗಬೇಕು ಎಂದರು. ‘ಫಿತ್ರ್ ಝಕಾತ್’ ಮೂಲಕ ಪ್ರತಿಯೊಬ್ಬರೂ ಹಬ್ಬದ ಸಡಗರದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ನೆರೆಹೊರೆಯವರು ಹಾಗೂ ಅನ್ಯಧರ್ಮೀಯರೊಂದಿಗೆ ಪ್ರೀತಿ ಮತ್ತು ವಿಶ್ವಾಸದಿಂದ ನಡೆದುಕೊಳ್ಳುವ ಮೂಲಕ ಸೌಹಾರ್ದತೆಯನ್ನು ಕಾಪಾಡಬೇಕುʼ ಎಂದು ಅವರು ಹೇಳಿದರು.







