

ಮಂಗಳೂರು : ಗುರುವಾರ ಸಂಜೆ ಶವ್ವಾಲ್ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಮಾರ್ಚ್ 20ರ ಶುಕ್ರವಾರದಂದು ಈದ್-ಉಲ್-ಫಿತರ್ ಹಬ್ಬವನ್ನು ಆಚರಿಸಲಾಗುವುದು.
ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಆಗಿರುವ ಶೈಖುನಾ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಚಂದ್ರ ದರ್ಶನವಾಗಿರುವುದಾಗಿ ತಿಳಿಸಿದ್ದು, ಶುಕ್ರವಾರ ಹಬ್ಬವನ್ನು ಆಚರಿಸುವಂತೆ ಸಮುದಾಯಕ್ಕೆ ಕರೆ ನೀಡಿದ್ದಾರೆ ಎಂದು ಮಸೀದಿ ಝೀನತ್ ಭಕ್ಷ್ ಇದರ ಕೋಶಾಧಿಕಾರಿ ಹಾಜಿ ಎಸ್. ಎಂ. ರಶೀದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಳ್ಳಾಲದಲ್ಲೂ ಖಾಝಿ ಕಾಂತಪುರಂ ಎ. ಪಿ. ಅಬೂಬಕ್ಕರ್ ಮುಸ್ಲಿಯಾರ್ ಶುಕ್ರವಾರ ಈದ್ ಆಚರಿಸಲು ಕರೆ ನೀಡಿದ್ದಾರೆ. ಇದನ್ನು ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಬಿ.ಜೆ. ಹನೀಫ್ ಪತ್ರಿಕಾ ಪ್ರಕಟಣೆಯಲ್ಲಿ ದೃಢಪಡಿಸಿದ್ದಾರೆ.
ಉಡುಪಿ ಜಿಲ್ಲಾ ನಾಯಿಬ್ ಖಾಝಿ ಬಿ.ಕೆ.ಅಬ್ದರ‍್ರಹ್ಮಾನ್ ಮದನಿ ಮೂಲೂರು ಜಿಲ್ಲೆಯಾದ್ಯಂತ ಶುಕ್ರವಾರ ಹಬ್ಬ ಆಚರಿಸಲಾಗುವುದು ಎಂದು ಘೋಷಿಸಿದ್ದಾರೆ. ಗುರುವಾರ ಸಂಜೆ ಚಂದ್ರ ದರ್ಶನವಾದ ಬೆನ್ನಲ್ಲೇ ಉಡುಪಿ ಸಂಯುಕ್ತ ಜಮಾತ್ ಪ್ರಧಾನ ಕಾರ್ಯದರ್ಶಿ ಹಾಜಿ ಎಂ.ಎ. ಬಾವು ಮೂಲೂರು ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ.
ಈ ಘೋಷಣೆಯೊಂದಿಗೆ ಪವಿತ್ರ ರಂಜಾನ್ ಮಾಸ ಅಂತ್ಯಗೊಂಡಿದ್ದು, ಕರಾವಳಿಯಾದ್ಯಂತ ಹಬ್ಬದ ಸಡಗರ ಆರಂಭವಾಗಿದೆ. ಕಳೆದ ಒಂದು ತಿಂಗಳಿಂದ ಮುಸ್ಲಿಮರು ಉಪವಾಸ ವ್ರತ ಆಚರಿಸುತ್ತಿದ್ದರು. ಚಂದ್ರದರ್ಶನ ಹಿನ್ನೆಲೆಯಲ್ಲಿ ಇಂದಿಗೆ ಉಪವಾಸ ವ್ರತ ಕೊನೆಯಾಗಿದೆ. ಹೀಗಾಗಿ ನಾಳೆ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಮೂಲಕ ಹಬ್ಬ ಆಚರಣೆ ಮಾಡಲಾಗುತ್ತದೆ.
ಶುಕ್ರವಾರ ಬೆಳಗಿನ ವೇಳೆ ಜಿಲ್ಲೆಯ ಪ್ರಮುಖ ಮಸೀದಿಗಳಲ್ಲಿ ವಿಶೇಷ ಈದ್ ನಮಾಜ್ ನಡೆಯಲಿದೆ. ಸಾವಿರಾರು ಭಕ್ತರು ಒಂದೇ ಸ್ಥಳದಲ್ಲಿ ಸೇರಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಬಳಿಕ ಪರಸ್ಪರ ಹಸ್ತಲಾಘವ ಮತ್ತು ಆಲಿಂಗಿಸಿಕೊಳ್ಳುವ ಮೂಲಕ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.
ಇಂದು ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಈದುಲ್ ಫಿತ್ರ್ ಆಚರಿಸಲಿರುವುದರಿಂದ ಆಯಾಯ ಜಿಲ್ಲಾಧಿಕಾರಿಳು ಮಾರ್ಚ್ 20ರಂದು ಸಾರ್ವತ್ರಿಕ ರಜೆ ಘೋಷಿಸಿದ್ದಾರೆ.






