March 20, 2026
WhatsApp Image 2026-03-20 at 9.54.09 AM

ಟೆಹ್ರಾನ್‌ : ಘನಘೋರ ಸಮರದ ನಡುವೆಯೇ ಇರಾನ್‌ ಮೂವರು ಹೋರಾಟಗಾರರನ್ನು ಗುರುವಾರ ಸಾರ್ವಜನಿಕವಾಗಿ ಗಲ್ಲೆಗೇರಿಸಿದೆ. 19ರ ಹರೆಯದ ಕುಸ್ತಿ ಚಾಂಪಿಯನ್‌ ಸಲೇಹ್‌ ಮೊಹಮ್ಮದಿ, ಸಯೀದ್‌ ದಾವೂದಿ ಮತ್ತು ಮೆಹ್ದಿ ಘಸೇಮಿ ಎಂಬವರನ್ನು ಗಲ್ಲಿಗೇರಿಸಲಾಗಿದೆ. ಇವರು ಕಳೆದ ಜನವರಿ 8ರಂದು ನಡೆದ ಸರ್ಕಾರಿ ವಿರುದ್ಧದ ಪ್ರತಿಭಟನೆ ವೇಳೆ ಇಬ್ಬರು ಪೊಲೀಸರನ್ನು ಕೊಂದ ಆರೋಪ ಹೊತ್ತಿದ್ದರು.

ಇರಾನ್‌ನ ಖೋಮ್‌ ನಗರದಲ್ಲಿ ಸಾರ್ವಜನಿಕವಾಗಿ ಈ ಮೂವರು ಯುವಕರನ್ನು ಗಲ್ಲೆಗೇರಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಶುರುವಾದ ಪ್ರತಿಭಟನೆ ಜನವರಿ ತನಕ ಮುಂದುವರಿದಿತ್ತು. ಈ ಮೂವರು ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಇಬ್ಬರು ಪೊಲೀಸರು ಪ್ರತಿಬಟನೆ ವೇಳೆ ಸಾವನ್ನಪ್ಪಿದ್ದು, ಆ ಆರೋಪವನ್ನು ಈ ಮೂವರ ಮೇಲೆ ಹೊರಿಸಿ ಅವರನ್ನು ಬಂಧಿಸಲಾಗಿತ್ತು.

ಯುವಕರನ್ನು ವಿಚಾರಣೆಯ ನಾಟಕವಾಡಿ ಆರೋಪಗಳನ್ನು ಸಾಬೀತುಪಡಿಸಿಕೊಳ್ಳಲಾಗಿದೆ. ಕಸ್ಟಡಿಯಲ್ಲಿಟ್ಟು ಚಿತ್ರಹಿಂಸೆ ಕೊಟ್ಟು ಅವರಿಂದ ತಪ್ಪೊಪ್ಪಿಗೆ ಹೇಳಿಕೆ ಪಡೆದುಕೊಳ್ಳಲಾಗಿದೆ ಎಂದು ಮಾನವ ಹಕ್ಕು ಸಂಘಟನೆಗಳು ಹೇಳಿವೆ. ರಾಜಕೀಯ ವಿರೋಧಿಗಳಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಯುದ್ಧದ ನಡುವೆಯೂ ಮೂವರು ಯುವಕರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗಿದೆ. ಇದು ಸರ್ಕಾರಿ ಪ್ರಾಯೋಜಿತ ಹತ್ಯೆ ಎಂದು ಮಾನವ ಹಕ್ಕು ಹೋರಾಟಗಾರರು ಆರೋಪಿಸಿದ್ದಾರೆ.

ಮೂವರು ಯುವಕರ ಮೇಲೆ ದೇವರ ವಿರುದ್ಧ ಹೋರಾಡಿದ ಆರೋಪ ಹೊರಿಸಲಾಗಿತ್ತು. ಈ ಅಪರಾಧಕ್ಕೆ ಇರಾನ್‌ನಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ. ಯುವರಿಗೆ ಸ್ವಯಂ ರಕ್ಷಿಸಿಕೊಳ್ಳುವ ಹಕ್ಕನ್ನು ನಿರಾಕರಿಸಲಾಗಿತ್ತು ಮತ್ತು ಅವರಿಂದ ಬಲವಂತವಾಗಿ ಹೇಳಿಕೆ ಪಡೆದುಕೊಳ್ಳಲಾಗಿತ್ತು ಎಂದು ಅಮ್ನೆಸ್ಟಿ ಇಂಟರ್‌ನ್ಯಾಶನಲ್‌ ಆರೋಪಿಸಿದೆ.

About The Author

Leave a Reply