

ವಿಧಾನ ಪರಿಷತ್ ಶಾಸಕರಲ್ಲಿ ವಿಭಿನ್ನ ಚಿಂತನೆ, ಕಾರ್ಯಶೈಲಿ ಮತ್ತು ಜನಸಂಪರ್ಕದ ಮೂಲಕ ತಮ್ಮದೇ ಆದ ಗುರುತನ್ನು ಮೂಡಿಸಿರುವವರು ಡಾ. ಮಂಜುನಾಥ ಭಂಡಾರಿ. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಜನಪ್ರತಿನಿಧಿಗಳಿಂದ ನಿರೀಕ್ಷಿಸುವ ಗುಣಗಳನ್ನು ಸಮರ್ಥವಾಗಿ ಅನಾವರಣಗೊಳಿಸಿರುವ ಅವರ ಕಾರ್ಯಪದ್ಧತಿ ಇತರರಿಗೆ ಮಾದರಿಯಾಗಿದೆ. ರಾಜಕೀಯವನ್ನು ಕೇವಲ ಅಧಿಕಾರದ ಸಾಧನವಾಗಿ ನೋಡುವುದಕ್ಕೆ ಬದಲಾಗಿ, ಸೇವೆಯ ಮಾರ್ಗವಾಗಿ ರೂಪಾಂತರಗೊಳಿಸಿರುವ ಅವರ ದೃಷ್ಟಿಕೋನವೇ ಅವರನ್ನು ಇತರರಿಂದ ಭಿನ್ನಗೊಳಿಸಿದೆ.
ಪಕ್ಷ ರಾಜಕೀಯದಿಂದ ಚುನಾವಣಾ ರಾಜಕೀಯದ ಮೂಲಕ ಸಕ್ರಿಯ ಸೇವೆಯತ್ತ
ಹಿಂದೆ ವಿಧಾನ ಪರಿಷತ್ ಸದಸ್ಯರೆಂದರೆ ಅಧಿವೇಶನಗಳಿಗೆ ಮಾತ್ರ ಸೀಮಿತವಾಗಿರುವುದು ಸಾಮಾನ್ಯ ಧೋರಣೆ. ಜನಸಾಮಾನ್ಯರೊಂದಿಗೆ ನೇರ ಸಂಪರ್ಕ ಕಡಿಮೆ, ಸ್ಥಳೀಯ ಸಮಸ್ಯೆಗಳ ಬಗ್ಗೆ ಆಳವಾದ ಅರಿವು ಇಲ್ಲದ ಪರಿಸ್ಥಿತಿ ಕಾಣಿಸಿಕೊಂಡಿತ್ತು. ಆದರೆ ಮಂಜುನಾಥ ಭಂಡಾರಿ ಅವರು ಈ ಹಳೆಯ ಚೌಕಟ್ಟನ್ನು ಮುರಿದು, ಜನರ ಮಧ್ಯೆ ಸಕ್ರಿಯವಾಗಿ ಬೆರೆತು, ಅವರ ಸಮಸ್ಯೆಗಳನ್ನೇ ತಮ್ಮ ಕಾರ್ಯದ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ. ರಾಜಕೀಯದಲ್ಲಿ ಹೊಸ ಮಾನದಂಡವನ್ನು ಅವರು ನಿರ್ಮಿಸಿದ್ದಾರೆ.

ಸಮಸ್ಯೆಗಳ ಅಧ್ಯಯನ ಮತ್ತು ಕಾರ್ಯರೂಪಕ್ಕೆ ತರುವ ದಕ್ಷತೆ
ಶಾಸಕರಾದ ಬಳಿಕ ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಸಮಸ್ಯೆಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಅವುಗಳಿಗೆ ಕಾರ್ಯರೂಪದ ಪರಿಹಾರ ನೀಡುವಲ್ಲಿ ಅವರ ಶೈಲಿ ವಿಶಿಷ್ಟವಾಗಿದೆ. ಸಮಸ್ಯೆಯನ್ನು ಕೇವಲ ಕೇಳುವುದಲ್ಲ, ಅದರ ಮೂಲವನ್ನು ಅರ್ಥಮಾಡಿಕೊಂಡು, ಸರಿಯಾದ ಅಧಿಕಾರಿಗಳಿಗೆ ತಲುಪಿಸಿ, ಅನುಸರಣೆ ಮಾಡಿ, ಅಂತಿಮ ಫಲಿತಾಂಶದವರೆಗೆ ಕೊಂಡೊಯ್ಯುವ ಅವರ ಕ್ರಮಬದ್ಧ ಕಾರ್ಯಪದ್ಧತಿ ನಿಜಕ್ಕೂ ಶ್ಲಾಘನೀಯ.
ಜನಪ್ರತಿನಿಧಿಗಳ ಧ್ವನಿಯಾಗಿ ಹೊರಹೊಮ್ಮಿದ ನಾಯಕ
ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಬೇಡಿಕೆಗಳನ್ನು ಶ್ರದ್ಧೆಯಿಂದ ಆಲಿಸಿ, ಅವುಗಳನ್ನು ಪಿಎಗಳ ಮೂಲಕ ದಾಖಲಿಸಿ, ನಂತರ ವಿಧಾನಸಭೆಯ ಅಧಿವೇಶನಗಳಲ್ಲಿ ಧ್ವನಿಯಾಗಿ ಮಂಡಿಸಿ ಪರಿಹಾರ ಕಂಡುಕೊಳ್ಳುವಲ್ಲಿ ಅವರು ತೋರಿದ ಬದ್ಧತೆ ಗಮನಾರ್ಹವಾಗಿದೆ. ಜನಪ್ರತಿನಿಧಿಗಳ ಸಮಸ್ಯೆಗಳು ತಮ್ಮ ಸಮಸ್ಯೆಗಳೆಂದು ಭಾವಿಸುವ ಮನೋಭಾವವೇ ಅವರ ನಾಯಕತ್ವದ ಬಲವಾಗಿದೆ.
ವ್ಯಾಪ್ತಿಯನ್ನು ಮೀರಿ ಅಭಿವೃದ್ಧಿಗೆ ಚಾಲನೆ
ತಮ್ಮ ಕ್ಷೇತ್ರದ ಮಿತಿಯನ್ನು ಮೀರಿ, ಇತರ ಪ್ರದೇಶಗಳಲ್ಲಿಯೂ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುವಲ್ಲಿ ಅವರು ತೋರಿದ ಚಾತುರ್ಯ ವಿಶಿಷ್ಟವಾಗಿದೆ. ಮೇಲಾಧಿಕಾರಿಗಳು, ಮಂತ್ರಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಹೊಂದಾಣಿಕೆ ಮತ್ತು ಸ್ನೇಹಪೂರ್ಣ ಸಂಬಂಧಗಳನ್ನು ಬೆಳೆಸಿ, ಅವುಗಳನ್ನು ಅಭಿವೃದ್ಧಿಗೆ ಬಳಸಿಕೊಳ್ಳುವ ಅವರ ಸಾಮರ್ಥ್ಯ ಎರಡೂ ಜಿಲ್ಲೆಗಳ ಪ್ರಗತಿಗೆ ಪೂರಕವಾಗಿದೆ.
ಪ್ರವಾಸೋದ್ಯಮ, ಶಿಕ್ಷಣ,ಉದ್ಯೋಗ ಮತ್ತು ಕ್ರೀಡೆಯಲ್ಲಿ ದೂರದೃಷ್ಟಿ
ಪ್ರವಾಸೋದ್ಯಮ, ಶಿಕ್ಷಣ, ಉದ್ಯೋಗ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಅವರ ಚಿಂತನೆ ದೂರದೃಷ್ಟಿಯಾಗಿದೆ. ಸ್ವತಃ ಕ್ರೀಡಾಪಟುವಾಗಿರುವುದರಿಂದ ಕ್ರೀಡಾರಂಗದ ಅಗತ್ಯತೆಗಳನ್ನು ಆಳವಾಗಿ ಅರ್ಥಮಾಡಿಕೊಂಡು, ಅದಕ್ಕೆ ಬೇಕಾದ ಪ್ರೋತ್ಸಾಹ ನೀಡುತ್ತಿರುವುದು ಗಮನಾರ್ಹ. ಈ ಎಲ್ಲಾ ಕ್ಷೇತ್ರಗಳಲ್ಲಿ ಸಮಗ್ರ ಅಭಿವೃದ್ಧಿಗೆ ಅವರು ಹಾಕಿರುವ ಪಥವು ಇತರರಿಗೆ ಮಾರ್ಗದರ್ಶನವಾಗಿದೆ.
ಗ್ರಾಮ ಪಂಚಾಯತ್ ಮಟ್ಟದ ಸಂಪರ್ಕದ ಕ್ರಾಂತಿ
ಹಿಂದಿನ ಶಾಸಕರು ವರ್ಷಕ್ಕೆ ಕೆಲವೇ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡುತ್ತಿದ್ದರೆ, ಮಂಜುನಾಥ ಭಂಡಾರಿ ಅವರು ಎರಡೂ ಜಿಲ್ಲೆಗಳ ಬಹುತೇಕ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ, ಸದಸ್ಯರು ಮತ್ತು ಸಿಬ್ಬಂದಿಗಳ ಸಮಸ್ಯೆಗಳನ್ನು ನೇರವಾಗಿ ಆಲಿಸಿದ್ದಾರೆ. ಇದು ಜನಸಂಪರ್ಕದ ಹೊಸ ಶೈಲಿಯನ್ನು ರೂಪಿಸಿದ್ದು, ಜನರಲ್ಲಿ ವಿಶ್ವಾಸವನ್ನು ಹೆಚ್ಚಿಸಿದೆ.
ನೇರ ಅನುದಾನ—ಪಾರದರ್ಶಕತೆಯ ಅಭಿವೃದ್ಧಿಗೆ ಹೊಸ ಮಾದರಿ
ಈ ಹಿಂದೆ ಆಯಾ ಕ್ಷೇತ್ರದ ನಾಯಕರುಗಳ ಮೂಲಕ ಅನುದಾನ ವಿಂಗಡಣೆಯಾಗುತ್ತಿದ್ದು, ಸ್ಥಳೀಯವಾಗಿ ಚುನಾಯಿತ ಜನಪ್ರತಿನಿಧಿಗಳ ಬೇಡಿಕೆಗಳನ್ನು ಈಡೇರಿಸುವಲ್ಲಿ ಸಮರ್ಪಕ ಹಾಗೂ ಪ್ರಮಾಣಿಕ ಪ್ರಯತ್ನಗಳು ಕಾಣಿಸಿಕೊಳ್ಳುತ್ತಿರಲಿಲ್ಲ; ಅಲ್ಲದೆ ಎರಡು ಜಿಲ್ಲೆಗಳ ಮಟ್ಟದಲ್ಲಿ ವಿಧಾನಪರಿಷತ್ ಶಾಸಕರಿಂದ ನೀಡಲಾಗುತ್ತಿದ್ದ ಅನುದಾನಗಳ ಹಂಚಿಕೆ ಕುರಿತು ಸ್ಪಷ್ಟತೆ ಅಥವಾ ಪಾರದರ್ಶಕತೆಯೂ ಇರಲಿಲ್ಲ. ಈ ಕೊರತೆಗಳನ್ನು ನಿವಾರಿಸಲು ಕೈಗೊಂಡ ಕ್ರಮದ ಫಲವಾಗಿ, ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ ನಂತರ ಕೇವಲ ನಾಲ್ಕು ವರ್ಷಗಳ ಅವಧಿಯಲ್ಲೇ ಬಹುತೇಕ ಗ್ರಾಮ ಪಂಚಾಯತಿಗಳಿಗೆ ಕನಿಷ್ಠ ಮಟ್ಟದ ಅನುದಾನವನ್ನು ಸಮರ್ಪಕವಾಗಿ ತಲುಪುವಂತೆ ಮಾಡಲಾಗಿರುವುದು ಅವರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ
ಅನುದಾನ ಹಂಚಿಕೆಯಲ್ಲಿ ಪಾರದರ್ಶಕತೆಯನ್ನು ತಂದು, ನೇರವಾಗಿ ಮತದಾರರ ಸಂಪರ್ಕದ ಮೂಲಕ ಪ್ರತಿ ಗ್ರಾಮಕ್ಕೂ ಕನಿಷ್ಠ ಅನುದಾನ ತಲುಪಿಸುವ ವ್ಯವಸ್ಥೆಯನ್ನು ಅವರು ರೂಪಿಸಿದ್ದಾರೆ. ಅನುದಾನದ ಕೊರತೆಯಿದ್ದರೂ ವಿಶೇಷ ಅನುದಾನಗಳನ್ನು ತರಿಸಿ ಜನರಿಗೆ ನ್ಯಾಯ ಒದಗಿಸಿರುವುದು ಅವರ ಸಾಧನೆಯಾಗಿದೆ.
ಪಂಚಾಯತ್ ರಾಜ್ ಸಂಘಟನೆಯ ಮೂಲಕ ಸ್ಥಳೀಯ ಸಂಸ್ಥೆಗಳ ಸಬಲೀಕರಣಕ್ಕೆ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರ ಪರಿಣಾಮಕಾರಿ ನಾಯಕತ್ವ
ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರ ನೇತೃತ್ವದಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ನೇರ ಸಂಪರ್ಕ ಸಾಧಿಸಲು ಸಂಘಟನೆಗೆ ಜವಾಬ್ದಾರಿ ನೀಡಲಾಗಿದ್ದು, ಅವರ ಸಹಕಾರದಲ್ಲಿ ಕುಂದುಕೊರತೆಗಳ ಮಾಹಿತಿ ವಿನಿಮಯವನ್ನು ಸಮರ್ಪಕವಾಗಿ ನಡೆಸಿ ಅನುದಾನ ಹಂಚಿಕೆ, ಕಚೇರಿ ಕಾರ್ಯಗಳ ತೊಡಕುಗಳು ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ; ಇದರಿಂದ ಎಲ್ಲರಲ್ಲೂ ತೃಪ್ತಿ ಮತ್ತು ವಿಶ್ವಾಸ ಮೂಡಿದೆ. ಇದೇ ವೇಳೆ, ಅವರದೇ ನೇತೃತ್ವದಲ್ಲಿ ‘ಹೊಂಬೆಳಕು’ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಸಿಬ್ಬಂದಿಗಳ ನಡುವೆ ಸೌಹಾರ್ದತೆಯ ಸಂಗಮಕ್ಕೆ ಅವಕಾಶ ಕಲ್ಪಿಸಿರುವುದರೊಂದಿಗೆ ಅವರ ಸಂಘಟನಾ ಸಾಮರ್ಥ್ಯಕ್ಕೆ ಉತ್ತಮ ಉದಾಹರಣೆಯಾಗಿದೆ.
ಪಕ್ಷನಿಷ್ಠೆ ಮತ್ತು ನಾಯಕತ್ವ ಬೆಳವಣಿಗೆಗೆ ಮಹತ್ವದ ಕೊಡುಗೆ
ಪಕ್ಷದ ಸಂಘಟನಾತ್ಮಕ ಆಸಕ್ತಿಯುಳ್ಳ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನೀಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದು, ಎ.ಐ.ಸಿ.ಸಿ ಹಾಗೂ ರಾಜ್ಯಮಟ್ಟದ ಎರಡು ಮಹತ್ವದ ಸಮಾವೇಶಗಳನ್ನು ತಮ್ಮದೇ ವಿದ್ಯಾಸಂಸ್ಥೆಯಲ್ಲಿ ಯಶಸ್ವಿಯಾಗಿ ಸಂಘಟಿಸಿ ಅದರ ಖರ್ಚು ವೆಚ್ಚವನ್ನು ಸ್ವತಃ ಭರಿಸುವ ಮೂಲಕ ತಮ್ಮ ಪಕ್ಷನಿಷ್ಠೆಯನ್ನು ಸ್ಪಷ್ಟವಾಗಿ ಪ್ರದರ್ಶಿಸಿದ್ದಾರೆ; ಜೊತೆಗೆ ನಿಗಮ ಮಂಡಳಿಗಳಲ್ಲಿ ಕರಾವಳಿ ಭಾಗಕ್ಕೆ ಇದುವರೆಗೆ ಸಿಗದಂತಹ ಅವಕಾಶಗಳನ್ನು ಒದಗಿಸಿ ಸುಮಾರು ಹತ್ತು ಮಂದಿ ಮುಖಂಡರಿಗೆ ಸ್ಥಾನ ಕಲ್ಪಿಸಿರುವುದು ಹೊಸ ನಾಯಕತ್ವದ ಬೆಳವಣಿಗೆಗೆ ಮಹತ್ವದ ಉತ್ತೇಜನವಾಗಿ ಪರಿಣಮಿಸಿದ್ದು, ಇದನ್ನು ಒಂದು ಸ್ವಾಗತಾರ್ಹ ಬೆಳವಣಿಗೆ ಎಂದು ವಿಶ್ಲೇಷಿಸಲಾಗುತ್ತಿದೆ.
ಶಿವಮೊಗ್ಗ ಕಾಂಗ್ರೆಸ್ ಭವನ—ಒಂದು ಇತಿಹಾಸದ ಹೆಜ್ಜೆಗುರುತು
ಶಿವಮೊಗ್ಗದಲ್ಲಿ ಕಾಂಗ್ರೆಸ್ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸುಂದರ ಮತ್ತು ಸುವ್ಯವಸ್ಥಿತ ಕಾಂಗ್ರೆಸ್ ಭವನ ನಿರ್ಮಾಣವಾಗಿರುವುದು ಅವರ ದೂರದೃಷ್ಟಿಯ ಪ್ರತೀಕವಾಗಿದೆ. ಕೇವಲ ಕಟ್ಟಡವಲ್ಲ, ಅದು ಕಾರ್ಯಕರ್ತರಿಗೆ ಪ್ರೇರಣೆ ನೀಡುವ ಕೇಂದ್ರವಾಗಿದ್ದು, ಪಕ್ಷದ ಚಟುವಟಿಕೆಗಳಿಗೆ ಹೊಸ ಚೈತನ್ಯವನ್ನು ತಂದಿದೆ. ಈ ಭವನವು ಸಂಘಟನಾ ಶಕ್ತಿಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದು, ರಾಜ್ಯ ಮಟ್ಟದಲ್ಲೇ ಮಾದರಿಯಾಗುವಂತಿದೆ.
“ಟೀಕೆಗಳು ಸಾಯಲಿ, ಕೆಲಸಗಳು ಉಳಿಯಲಿ” ಎಂಬ ಸಂದೇಶ
ಮಂಜುನಾಥ ಭಂಡಾರಿಯವರ ಕಾರ್ಯಶೈಲಿ “ಟೀಕೆಗಳು ಸಾಯಬಹುದು, ಆದರೆ ಕೆಲಸಗಳು ಶಾಶ್ವತ” ಎಂಬ ಸಂದೇಶವನ್ನು ಸ್ಪಷ್ಟವಾಗಿ ನೀಡುತ್ತದೆ. ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು ಜನಮನದಲ್ಲಿ ಉಳಿಯುತ್ತವೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
ಭವಿಷ್ಯದ ಉನ್ನತ ಸ್ಥಾನಮಾನ ಸಿಗಲಿ ಅಭಿಮಾನಿಗಳ ಅಭಿಲಾಷೆ
ಇಂತಹ ಮೇರು ವ್ಯಕ್ತಿತ್ವದ ನಾಯಕರು ಮುಂದಿನ ದಿನಗಳಲ್ಲಿ ಪಕ್ಷ ಮತ್ತು ಸರ್ಕಾರದಲ್ಲಿ ಉನ್ನತ ಸ್ಥಾನಮಾನಗಳನ್ನು ಅಲಂಕರಿಸುವುದು ಸಹಜ. ಮಂಜುನಾಥ ಭಂಡಾರಿಯವರಂತಹ ನಾಯಕತ್ವ ರಾಜ್ಯಕ್ಕೆ ಇನ್ನಷ್ಟು ಅಭಿವೃದ್ಧಿಯ ದಿಕ್ಕು ತೋರಿಸಲಿ ಎಂಬುದು ಜನರ ಹಾಗೂ ಅಭಿಮಾನಿಗಳ ಆಶಯವಾಗಿದೆ.






