

ಮಂಗಳೂರು: ದ.ಕ. ಜಿಲ್ಲೆಯಲ್ಲಿ ತಾಪಮಾನ ಏರಿಕೆಯಾಗುತ್ತಿದೆ. ಮಂಗಳವಾರ ಬೆಳಗ್ಗೆ 8:30ರಿಂದ ಸಂಜೆ 5:30ರವರೆಗೆ ದ.ಕ.ಜಿಲ್ಲೆಯಲ್ಲಿ 39 ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಹಾಗಾಗಿ ಜನರು ಸೂಕ್ತ ಮುಂಜಾಗ್ರತೆ ವಹಿಸಬೇಕು ಎಂದು ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಡಿಲವಾದ ಉಡುಪುಗಳನ್ನು ಧರಿಸಬೇಕು. ಮಧ್ಯಾಹ್ನ 12ರಿಂದ ಅಪರಾಹ್ನ 3 ಗಂಟೆಯೊಳಗೆ ನೇರ ಬಿಸಿಲಿಗೆ ತೆರೆದುಕೊಳ್ಳುವುದರಿಂದ ತಪ್ಪಿಸಬೇಕು. ಹೊರ ಹೋಗುವಾಗ ಸಾಕಷ್ಟು ನೀರು ಕೊಂಡೊಯ್ಯಬೇಕು. ಕಾರ್ಬೊನೇಟೆಡ್ ಪಾನೀಯಗಳನ್ನು ತ್ಯಜಿಸಿ ನೀರು, ಎಳನೀರು, ಮನೆಯಲ್ಲೇ ಪಾನೀಯಗಳನ್ನು ಮಾಡಿ ಕುಡಿಯಬಹುದು ಎಂದು ಡಾ.ಎಚ್.ಆರ್. ತಿಮ್ಮಯ್ಯ ಸಲಹೆ ನೀಡಿದರು.






