

ಬೀದಿ ನಾಯಿಯೊಂದು ಪರಚಿದ ಆರು ತಿಂಗಳ ನಂತರ ಒಂಬತ್ತು ವರ್ಷದ ಬಾಲಕಿಯೊಬ್ಬಳು ರೇಬಿಸ್ ಸೋಂಕಿಗೆ ಬಲಿಯಾಗಿರುವ ಘಟನೆ ಮುಂಬೈನಲ್ಲಿ ವರದಿಯಾಗಿದೆ. ನಾಲ್ಕನೇ ತರಗತಿ ವಿದ್ಯಾರ್ಥಿನಿ ಕಶಿಶ್ ಸಹಾನಿ ಮೃತಪಟ್ಟ ದುರ್ದೈವಿ. ಲಸಿಕೆ ಪಡೆಯಲು ಬಾಲಕಿ ತೋರಿದ ಭೀತಿ ಮತ್ತು ಕುಟುಂಬದವರ ನಿರ್ಲಕ್ಷ್ಯವೇ ಈ ಸಾವಿಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಕಳೆದ ಆರು ತಿಂಗಳ ಹಿಂದೆ ಕಶಿಶ್ ತನ್ನ ಅಜ್ಜನೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವೇಳೆ ಬೀದಿ ನಾಯಿಯೊಂದು ಆಕೆಯನ್ನು ಪರಚಿ ಗಾಯಗೊಳಿಸಿತ್ತು. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚುಚ್ಚುಮದ್ದು ಪಡೆಯಲು ಬಾಲಕಿ ತೀವ್ರವಾಗಿ ಪಟ್ಟು ಹಿಡಿದು ನಿರಾಕರಿಸಿದ್ದಳು. ಗಾಯವು ಮೇಲ್ನೋಟಕ್ಕೆ ವಾಸಿಯಾದಂತೆ ಕಂಡಿದ್ದರಿಂದ ಪೋಷಕರು ಕೂಡ ಲಸಿಕೆ ಹಾಕಿಸುವ ಗೋಜಿಗೆ ಹೋಗಿರಲಿಲ್ಲ.

ಆದರೆ, ಕಳೆದ ಕೆಲವು ದಿನಗಳಿಂದ ಬಾಲಕಿಯ ಆರೋಗ್ಯದಲ್ಲಿ ತೀವ್ರ ವ್ಯತ್ಯಯ ಕಂಡುಬಂದಿತ್ತು. ಆಹಾರ ಮತ್ತು ನೀರು ಸೇವಿಸಲು ಸಾಧ್ಯವಾಗದೆ ಆಕೆ ಪರದಾಡುತ್ತಿದ್ದಳು ಹಾಗೂ ಕಣ್ಣುಗಳು ಕೆಂಪಾಗಿದ್ದವು. ರೇಬಿಸ್‌ನ ಲಕ್ಷಣಗಳು ತೀವ್ರಗೊಳ್ಳುತ್ತಿದ್ದಂತೆ ಆಕೆಯನ್ನು ಮುಂಬೈನ ಕಸ್ತೂರಬಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ, ಮಾರ್ಚ್ 23 ರಂದು ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ.
ಈ ಸಾವಿನ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಮುಂಬೈ ಮಹಾನಗರ ಪಾಲಿಕೆಯು, ಮೃತ ಬಾಲಕಿಯ ಕುಟುಂಬ ಸದಸ್ಯರು ಹಾಗೂ ಆಕೆಯೊಂದಿಗೆ ಸಂಪರ್ಕದಲ್ಲಿದ್ದ ನೆರೆಹೊರೆಯವರ ವೈದ್ಯಕೀಯ ಪರೀಕ್ಷೆ ನಡೆಸಲು ಮುಂದಾಗಿದೆ. ನಾಯಿ ಅಥವಾ ಬೆಕ್ಕುಗಳು ಕಚ್ಚಿದಾಗ ಇಲ್ಲವೇ ಸಣ್ಣದಾಗಿ ಗಾಯಗೊಳಿಸಿದರೂ ಸಹ ಅದನ್ನು ನಿರ್ಲಕ್ಷಿಸದೆ ಕಡ್ಡಾಯವಾಗಿ ವೈದ್ಯಕೀಯ ಸಲಹೆ ಮತ್ತು ಲಸಿಕೆ ಪಡೆಯಬೇಕು ಎಂದು ವೈದ್ಯಕೀಯ ತಂಡವು ಸಾರ್ವಜನಿಕರಲ್ಲಿ ಕಟ್ಟುನಿಟ್ಟಿನ ಮನವಿ ಮಾಡಿದೆ.






