March 28, 2026
WhatsApp Image 2026-03-28 at 9.17.11 AM

ಉಳ್ಳಾಲ: ಹೊಸ ಬಾವಿ ಕೊರೆಯುವ ಕಾಮಗಾರಿ ನಡೆಸುತ್ತಿದ್ದ ವೇಳೆ ಕ್ರೇನ್‌ನಿಂದ ಮಣ್ಣು ತುಂಬಿದ್ದ ಕಬ್ಬಿಣದ ಬಕೆಟ್ ತಲೆಗೆ ಬಿದ್ದ ಪರಿಣಾಮ ಕೂಲಿ ಕಾರ್ಮಿಕ ದಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಉಳ್ಳಾಲ ಸಮೀಪ ಕುತ್ತಾರು ಪದವಿನ ಸಲಾತ್ ನಗರದಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಮಲ್ಲಾಪುರ ನಿವಾಸಿ ಶಿವಕುಮಾರ ಜಿ.ಕೆ (30) ಮೃತರು ಎಂದು ಗುರುತಿಸಲಾಗಿದೆ.ಉಳ್ಳಾಲ ತಾಲೂಕಿನ ಕುತ್ತಾರು ಪದವಿನ ಸಲಾತ್ ನಗರದಲ್ಲಿ ಹೊಸ ಬಾವಿ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಆರು ಕೂಲಿ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದರು. ಇವರ ಪೈಕಿ ಶಿವಕುಮಾರ್ ಸೇರಿ ಮೂವರು ಕಾರ್ಮಿಕರು ಮೂವತ್ತು ಅಡಿ ಆಳ ಕೊರೆಯಲಾದ ಬಾವಿಯೊಳಗಡೆ ಕೆಲಸ ನಿರ್ವಹಿಸುತ್ತಿದ್ದರು.

ಈ ವೇಳೆ ಕ್ರೇನ್ ಮೂಲಕ ಕಬ್ಬಿಣದ ಬಕೆಟ್‌ನಲ್ಲಿ ಮಣ್ಣು ಮೇಲಕ್ಕೆತ್ತುತ್ತಿದ್ದ ಸಂದರ್ಭ ಕ್ರೇನ್‌ನ ಕೊಕ್ಕೆಯಿಂದ ಬೇರ್ಪಟ್ಟ ಮಣ್ಣು ತುಂಬಿದ ಬಕೆಟ್ ಶಿವಕುಮಾರ್ ತಲೆ ಮೇಲೆ ಬಿದ್ದಿದೆ.

ಗಂಭೀರ ಗಾಯಗೊಂಡಿದ್ದ ಶಿವಕುಮಾರ್‌ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾದರೂ ದಾರಿ ಮಧ್ಯೆ ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಬಾವಿಯೊಳಗಿದ್ದ ಇತರ ಇಬ್ಬರು ಕಾರ್ಮಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಮೃತ ಶಿವಕುಮಾರ್ ವಿವಾಹಿತರಾಗಿದ್ದು ಪತ್ನಿ ಮತ್ತು ಮೂರು ವರ್ಷದ ಗಂಡು ಮತ್ತು ಒಂದು ವರ್ಷದ ಹೆಣ್ಣು ಮಗಳೊಂದಿಗೆ ತೊಕ್ಕೊಟ್ಟುವಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

About The Author

Leave a Reply