

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಪೈಕಿ ತಾಯಿ ಮತ್ತು ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದ ಇಬ್ಬರು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಘಟನೆಯ ವಿವರ:

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮಲ್ಲೇನಹಳ್ಳಿಯಲ್ಲಿ ಈ ಘೋರ ಕೃತ್ಯ ಸಂಭವಿಸಿದೆ. ಮನೆಯಲ್ಲಿದ್ದ ತಾಯಿ ಹಾಗೂ ಅಕ್ಕನ ಕತ್ತು ಸೀಳಿ ಕೊಲೆ ಮಾಡಿದ ಮೋಹನ್ ಗೌಡ ಎಂಬಾತ, ತಾನೂ ಸಹ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.ಆಶಾ (55) ಮತ್ತು ಇವರ ಮಗಳು ವರ್ಷಿತಾ (34) ಸ್ಥಳದಲ್ಲೇ ಮೃತಪಟ್ಟ ದುರ್ದೈವಿಗಳು.
ಘಟನೆಯಲ್ಲಿ ವರ್ಷಿತಾ ಅವರ ಪುತ್ರ ಮಯಾಂಕ್ ಹಾಗೂ ಕೃತ್ಯ ಎಸಗಿದ ಮೋಹನ್ ಗೌಡ ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ಇಬ್ಬರ ಸ್ಥಿತಿ ಗಂಭೀರವಾಗಿದೆ. ಇವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವೀಡಿಯೋ ಮಾಡಿ ಆತ್ಮಹತ್ಯೆಗೆ ಶರಣು:
ಘಟನೆಗೂ ಮುನ್ನ ಮೋಹನ್ ಗೌಡ ಎಂಬಾತ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವೀಡಿಯೋ ಮಾಡಿದ್ದ ಎನ್ನಲಾಗಿದೆ. ನಿನ್ನೆ ರಾತ್ರಿ ಈ ವೀಡಿಯೋ ಚಿತ್ರೀಕರಿಸಿದ್ದ ಮೋಹನ್, ಬಳಿಕ ಈ ಭೀಕರ ನಿರ್ಧಾರ ಕೈಗೊಂಡಿದ್ದಾನೆ. ಕೌಟುಂಬಿಕ ಕಲಹ ಅಥವಾ ಆರ್ಥಿಕ ಸಂಕಷ್ಟ ಈ ಘಟನೆಗೆ ಕಾರಣವಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.






