

ಕಾಸರಗೋಡು: ಕೇರಳ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯ ಕಾವು ದಿನೇ ದಿನೇ ಹೆಚ್ಚುತ್ತಿದ್ದು, ತ್ರಿಕೋನ ಸ್ಪರ್ಧೆಯಿಂದಾಗಿ ಮಂಜೇಶ್ವರ ಕ್ಷೇತ್ರದಲ್ಲಿ ರಾಜಕೀಯ ಕಣ ತೀವ್ರ ಪೈಪೋಟಿಯ ರೂಪ ಪಡೆದಿದೆ. ವಿವಿಧ ರಾಜಕೀಯ ಪಕ್ಷಗಳು ತಮ್ಮ ಪ್ರಚಾರ ಕಾರ್ಯಗಳನ್ನು ವೇಗಗೊಳಿಸಿದ್ದು, ಮತದಾರರ ಮನಗೆಲ್ಲಲು ನಾಯಕರು ಹರಸಾಹಸ ಪಡುತ್ತಿದ್ದಾರೆ.
ಇದರ ನಡುವೆ ಮಂಜೇಶ್ವರ, ಪಾವೂರು ಮತ್ತು ವರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಪ್ರಚಾರ ಸಭೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಚುನಾವಣಾ ವೀಕ್ಷಕರಾಗಿ ಆಗಮಿಸಿದ್ದ ದಕ್ಣಿಣ ಕನ್ನಡ ಮಹಿಳಾ ಪ್ರದಾನ ಕಾರ್ಯದರ್ಶಿ ಕೆ.ಎ. ಅಸ್ಮ ಹಸೈನಾರ್ ಭಾಗವಹಿಸಿ ಮತಯಾಚನೆ ನಡೆಸಿದರು.

ವಿವಿಧ ಸಭೆಗಳಲ್ಲಿ ಮಾತನಾಡಿದ ಅಸ್ಮ ಅವರು ಎ.ಕೆ.ಎಂ ಅಶ್ರಪ್ ಅವರ ವ್ಯಕ್ತಿತ್ವ, ಸೇವಾ ಮನೋಭಾವ ಮತ್ತು ನಾಯಕತ್ವ ಗುಣಗಳನ್ನು ವಿಶ್ಲೇಷಿಸಿದರು.
ಅಶ್ರಪ್ ಅವರನ್ನು “ಕೇರಳದ ಯು.ಟಿ.ಖಾದರ್” ಎಂದು ಬಣ್ಣಿಸಿದ ಅಸ್ಮ ಹಸೈನಾರ್, ಅವರ ಶರೀರ ಭಾಷೆ, ನಡೆಯು-ನುಡಿಗಳು ಹಾಗೂ ಚುರುಕುತನವು ಯು.ಟಿ.ಖಾದರ್ ಅವರನ್ನು ಹೋಲುವಂತಿದೆ ಎಂದು ಹೇಳಿದರು. ಜನರ ನಡುವೆ ಬೆರೆತು ಕಾರ್ಯನಿರ್ವಹಿಸುವ ಅವರ ಶೈಲಿ ಮತ್ತು ಸದಾ ಚಲನೆಯಲ್ಲಿರುವ ದೈನಂದಿನ ಚಟುವಟಿಕೆಗಳು ಅವರನ್ನು ವಿಶಿಷ್ಟ ನಾಯಕನನ್ನಾಗಿ ಮಾಡಿವೆ ಎಂದರು.

ದಿನವಿಡೀ ಕ್ಷೇತ್ರದಲ್ಲಿ ಸುತ್ತಾಡುತ್ತಾ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಅಶ್ರಪ್ ಅವರ ಕಾರ್ಯಶೈಲಿ ಜನಮನ ಗೆದ್ದಿದೆ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ನಿರಂತರವಾಗಿ ಕಾರ್ಯನಿರ್ವಹಿಸುವ ಅವರು ಅಭಿವೃದ್ಧಿ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿರುವುದು ಗಮನಾರ್ಹವಾಗಿದೆ ಎಂದು ಅವರು ಪ್ರಶಂಸಿಸಿದರು.
ಜಾತ್ಯತೀತ ಸಿದ್ಧಾಂತವನ್ನು ಅಳವಡಿಸಿಕೊಂಡು ಎಲ್ಲ ಸಮುದಾಯಗಳನ್ನು ಒಗ್ಗೂಡಿಸುವ ಕಾರ್ಯದಲ್ಲಿ ಅಶ್ರಪ್ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಸಮಾಜದಲ್ಲಿ ಏಕತೆ ಮತ್ತು ಸೌಹಾರ್ದತೆಯನ್ನು ಬಲಪಡಿಸುವ ಅವರ ನಿಲುವು, ಯು.ಟಿ.ಖಾದರ್ ಅವರ ರಾಜಕೀಯ ಧೋರಣೆಯನ್ನು ನೆನಪಿಸುವಂತಿದೆ ಎಂದು ಅಸ್ಮ ಹಸೈನಾರ್ ಅಭಿಪ್ರಾಯಪಟ್ಟರು.
ಉತ್ತರ ಕನ್ನಡದಲ್ಲಿ ನಡೆದ ಅರ್ಜುನ್ ಪ್ರಕರಣದಲ್ಲಿ ಮೃತದೇಹ ಪತ್ತೆ ಹಚ್ಚಲು ತಿಂಗಳುಗಳ ಕಾಲ ಹೋರಾಟ ನಡೆಸಿದ ಘಟನೆ ಅವರ ಹೋರಾಟ ಮನೋಭಾವವನ್ನು ತೋರಿಸುತ್ತದೆ
ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಈ ರೀತಿಯ ಬದ್ಧತೆ ಅವರ ನಾಯಕತ್ವದ ಗುಣವನ್ನು ಇನ್ನಷ್ಟು ಸ್ಪಷ್ಟಪಡಿಸಿದೆ.
ಕೇರಳ–ಕರ್ನಾಟಕ ಗಡಿಭಾಗದ ಜನರು ಅನಾರೋಗ್ಯಕ್ಕೆ ತುತ್ತಾದಾಗ ಆಸ್ಪತ್ರೆಗೆ ದೌಡಾಯಿಸಿ ನೆರವಾಗುವುದು ಸೇರಿದಂತೆ, ಬಡ ರೋಗಿಗಳ ಆಸ್ಪತ್ರೆ ವೆಚ್ಚ ಭರಿಸಲು ಸಹಾಯ ಮಾಡುವ ಮಾನವೀಯ ಗುಣಗಳನ್ನು ಅಶ್ರಪ್ ಹೊಂದಿದ್ದಾರೆ. ಇಂತಹ ಮಾನವೀಯತೆ ಹೊಂದಿದ ನಾಯಕರು ಸಮಾಜಕ್ಕೆ ಅತ್ಯಂತ ಅಗತ್ಯ ಎಂದು ಅಸ್ಮ ಹಸೈನಾರ್ ಹೇಳಿದರು.
ಮುಂದಿನ ದಿನಗಳಲ್ಲಿ ಕೇರಳದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ, ಅಶ್ರಪ್ ಅವರು ಸ್ಪೀಕರ್ ಅಥವಾ ಮಂತ್ರಿ ಸ್ಥಾನವನ್ನು ಅಲಂಕರಿಸುವಂತಹ ಯೋಗ್ಯ ನಾಯಕನಾಗಲಿ ಎಂಬ ಶುಭ ಹಾರೈಕೆಯನ್ನು ಅಸ್ಮ ಹಸೈನಾರ್ ವ್ಯಕ್ತಪಡಿಸಿದರು. ಅವರ ಸಾಮರ್ಥ್ಯ ಮತ್ತು ಸೇವಾ ಮನೋಭಾವವು ರಾಜ್ಯ ಮಟ್ಟದ ಹೊಣೆಗಾರಿಕೆಯನ್ನು ನಿರ್ವಹಿಸಲು ತಕ್ಕದ್ದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕೊನೆಯಲ್ಲಿ, ಕೋಮುವಾದಿ ಶಕ್ತಿಗಳ ಹಿಡನ್ ಅಜೆಂಡಾಗೆ ಬಲಿಯಾಗದೆ, ಅಭಿವೃದ್ಧಿ ಮತ್ತು ಜಾತ್ಯತೀತ ನಿಲುವು ಹೊಂದಿರುವ ಅಶ್ರಪ್ ಅವರಿಗೆ ಅತ್ಯಧಿಕ ಮತ ನೀಡಿ ಭರ್ಜರಿ ಗೆಲುವು ನೀಡುವಂತೆ ಅವರು ಮತದಾರರಲ್ಲಿ ಮನವಿ ಮಾಡಿದರು.
ಈ ಸಂಧರ್ಭದಲ್ಲಿ,ದಕ್ಷಿಣ ಕನ್ನಡ ಜಿಲ್ಲೆಯ ಅಸಂಘಟಿತ ಕಾರ್ಮಿಕ ಘಟಕದ ಜಿಲ್ಲಾದ್ಯಕ್ಷರಾದ ಬಿ.ಎಂ.ಅಬ್ಬಾಸ್ ಅಲಿ,ನ್ಯಾಯವಾದಿ ನೂರುದ್ದೀನ್ ಸಾಲ್ಮರ,ಗಡಿಭಾಗದ ಕರೋಪಾಡಿ ಗ್ರಾಮ ಪಂಚಾಯತ್ ಮಾಜಿ ಅದ್ಯಕ್ಷ ಅನ್ವರ್ ಕರೋಪಾಡಿ,ದಕ್ಷಿಣ ಕನ್ನಡ ಮಹಿಳಾ ಕಾರ್ಯದರ್ಶಿ,ಶ್ರೀಮತಿ ಸವಿತಾ ಬರ್ಕಳ,ಸುಲೋಚನಾ ರೈ,ಯುವ ಕಾಂಗ್ರೇಸ್ ಮುಖಂಡ ಹಪೀಝ್ ಸಾಲೆತ್ತೂರು,NSUI ಮುಖಂಡ ಅಕ್ಮಲ್ ಮಂಗಳೂರು ಸೇರಿದಂತೆ ವಿವಿಧ ಮುಖಂಡರು ಹಾಜರಿದ್ದರು.






