Visitors have accessed this post 408 times.

ಗ್ರಾಮ ಪಂಚಾಯ್ತಿ ಸದಸ್ಯರಿಗೆ ಇನ್ಮುಂದೆ 2 ಗಂಟೆ ಸ್ಪೆಷಲ್‌ ಕ್ಲಾಸ್‌; ಯಾಕೆ?

Visitors have accessed this post 408 times.

ಗ್ರಾಮಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸರ್ಕಾರವು ಸ್ಥಳೀಯ ಆಡಳಿತ ವಹಿಸಿಕೊಳ್ಳಲು ಗ್ರಾಮ ಪಂಚಾಯ್ತಿ ವ್ಯವಸ್ಥೆ ಜಾರಿ ಮಾಡಿರುವುದು ಗೊತ್ತೇ ಇದೆ. ಐದು ವರ್ಷಗಳಿಗೊಮ್ಮೆ ಗ್ರಾಮಗಳಿಂದಲೇ ಅಭ್ಯರ್ಥಿಗಳನ್ನು ಗೆಲ್ಲಿಸಿ, ಪಂಚಾಯ್ತಿ ಸದಸ್ಯರು, ಅಧ್ಯಕ್ಷರು ಹಾಗೂ ಒಂದು ಚುನಾಯಿತರ ತಂಡವನ್ನು ಆಯ್ಕೆ ಕೂಡ ಮಾಡುತ್ತೇವೆ.

ಇನ್ನು ಪಂಚಾಯ್ತಿಗಳಿಗೆ ಚುನಾಯಿತರಾಗುವ ಬಹುತೇಕ ಅಭ್ಯರ್ಥಿಗಳು ಅಷ್ಟೇನೂ ಶಿಕ್ಷಣ ಪಡೆದವರಾಗಿರುವುದಿಲ್ಲ. ಇನ್ನೂ ಕೆಲವರು ಅನಕ್ಷರಸ್ಥರೂ ಆಗಿರುತ್ತಾರೆ. ಅಂತವರಿಗಾಗಿ ರಾಜ್ಯ ಸರ್ಕಾರವು ಸಾಕ್ಷರ ಸನ್ಮಾನ ಎನ್ನುವ ಮಹತ್ವದ ಕಾರ್ಯಕ್ರಮವನ್ನು ಜಾರಿ ಮಾಡಿದೆ.

ಗ್ರಾಮ ಪಂಚಾಯಿತಿಗಳ 6,346 ಅನಕ್ಷರಸ್ಥ ಚುನಾಯಿತ ಪ್ರತಿನಿಧಿಗಳನ್ನು ಸಾಕ್ಷರರನ್ನಾಗಿಸುವ ʼಸಾಕ್ಷರ ಸನ್ಮಾನʼ ಕಾರ್ಯಕ್ರಮವು ಸೆಪ್ಟೆಂಬರ್‌ 1ರಿಂದ ಆರಂಭಗೊಂಡಿದೆ. 21 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವು ಜಾರಿಯಾಗಿದೆ. ಅದರಂತೆ ಅಕ್ಟೋಬರ್‌ 20ರವರೆಗೆ ಪ್ರತಿದಿನ 2 ಗಂಟೆಗಳಂತೆ 50 ದಿನ ಒಟ್ಟು 100 ಗಂಟೆ ತರಬೇತಿ ನೀಡಲಾಗುತ್ತದೆ ಎಂದು ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಮಾಹಿತಿ ನೀಡಿದರು.

ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ 94,775 ಚುನಾಯಿತ ಪ್ರತಿನಿಧಿಗಳಿದ್ದಾರೆ. ಅವರಲ್ಲಿ 9,357 ಮಂದಿ ಅನಕ್ಷರಸ್ಥರಿದ್ದಾರೆ. ಇವರನ್ನು ಸಾಕ್ಷರರನ್ನಾಗಿಸುವ ಮೊದಲ ಹಂತದ ಕಾರ್ಯಕ್ರಮವನ್ನು ಕಳೆದ ವರ್ಷ ಹಮ್ಮಿಕೊಂಡಿದ್ದೆವು. ಆಗ 2,403 ಮಹಿಳೆಯರು ಮತ್ತು 608 ಪುರುಷರು ಸೇರಿ ಒಟ್ಟು 3,011 ಪ್ರತಿನಿಧಿಗಳಿಗೆ ತರಬೇತಿ ನೀಡಲಾಗಿತ್ತು ಎಂದು ವಿವರಿಸಿದರು.

ಎರಡನೇ ಹಂತದ ಕಾರ್ಯಕ್ರಮವಾಗಿ ಈಗ ಮತ್ತೊಮ್ಮೆ ಸಾಕ್ಷರ ಸನ್ಮಾನ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ 21 ಜಿಲ್ಲೆಗಳಲ್ಲಿ ಇದೇ ಮುಂದಿನ ಅಕ್ಟೋಬರ್ 20ರವರೆಗೆ ಈ ತರಬೇತಿ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ 2 ಗಂಟೆಗಳಂತೆ ಪಂಚಾಯ್ತಿ ಪ್ರತಿನಿಧಿಗಳಿಗೆ ಅಕ್ಷರಾಭ್ಯಾಸ ಮಾಡಿಸಲಾಗುತ್ತದೆ.

ಸ್ಪೆಷಲ್‌ ಕ್ಲಾಸ್‌ ಹೇಗಿರುತ್ತೇ?: ಪಂಚಾಯ್ತಿ ಆಡಳಿತದಲ್ಲಿರುವ ಚುನಾಯಿತರಿಗೆ ಓದುವುದು ಮತ್ತು ಬರೆಯುವುದನ್ನು ಕಲಿಸಲಾಗುವುದು. ಜೊತೆಗೆ ಅವರಿಗೆ ಹಣಕಾಸಿನ ವಿಚಾರಗಳಿಗೆ ನೆರವಾಗಲು ಲೆಕ್ಕಾಚಾರದ ಜ್ಞಾನ ನೀಡಿ, ಸ್ವಾವಲಂಬಿಗಳನ್ನಾಗಿ ಮಾಡಲಾಗುವುದು. ಗ್ರಾಮ ಪಂಚಾಯ್ತಿಗಳಲ್ಲಿ ಬರುವ ಸಭೆಗಳು, ನೋಟಿಸ್‌, ಮಾರ್ಗಸೂಚಿಗಳು ಸೇರಿದಂತೆ ಪತ್ರಗಳನ್ನು ಓದುವ ಹಾಗೂ ಅದನ್ನು ಅರ್ಥ ಮಾಡಿಕೊಳ್ಳುವಂತೆ ಅವರನ್ನು ತಯಾರು ಮಾಡುವುದು.

ನಿರ್ಭೀತಿಯಿಂದ ಪಂಚಾಯಿತಿ ಆಡಳಿತದಲ್ಲಿ ಅವರು ಭಾಗವಹಿಸುವಂತೆ ಉತ್ತೇಜಿಸುವುದು ಈ ಕಾರ್ಯಕ್ರಮದ ಉದ್ದೇಶ ಎನ್ನಲಾಗಿದೆ. ಸಾಕ್ಷರ ಸನ್ಮಾನ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗುವ ಪಂಚಾಯಿತಿ ಸದಸ್ಯರಿಗೆ ತರಬೇತಿ ಕಿಟ್‌ ಮತ್ತು ಗೌರವಧನ ಕೂಡ ಇಲಾಖೆ ನೀಡಲಿದೆಯಂತೆ.

ಮೀಸಲಾತಿ ಮಾನದಂಡಗಳ ಮೇರೆಗೆ ಪಂಚಾಯ್ತಿ ಚುನಾವಣೆಗಳಲ್ಲಿ ಸಾಕಷ್ಟು ಅಕ್ರಮಗಳು ನಡೆಯುತ್ತವೆ ಎನ್ನುವ ಆರೋಪವಿದೆ. ಗೆದ್ದ ನಂತರವೂ ಅನುದಾನದ ಕಬಳಿಕೆ ಸೇರಿದಂತೆ ಸಾಕಷ್ಟು ಅವ್ಯವಹಾರಗಳು ನಡೆಯುವುದು ಆಗಾಗ ಬೆಳಕಿಗೆ ಬರುತ್ತಿರುತ್ತದೆ. ಇನ್ನೂ ಕೆಲವರು ನಾಮಕಾವಸ್ಥೆಗೆ ಅಧಿಕಾರದಲ್ಲಿದ್ದರೆ, ಅವರ ಅಧಿಕಾರವನ್ನು ಇನ್ಯಾರೋ ದುರ್ಬಳಕೆ ಮಾಡಿಕೊಂಡು ಅವ್ಯವಹಾರ ನಡೆಸುತ್ತಾರೆ ಎನ್ನುವ ಆರೋಪವೂ ಇದೆ. ಇದಕ್ಕೆಲ್ಲ ಮುಖ್ಯ ಕಾರಣ ಅಲ್ಲಿನ ಚುನಾಯಿತ ಪ್ರತಿನಿಧಿಗಳಿಗೆ ಅಕ್ಷರ ಜ್ಞಾನ ಇಲ್ಲದಿರುವುದು. ಹಾಗಾಗಿ ಇಂತಹ ಕಾರ್ಯಕ್ರಮಗಳನ್ನು ಪ್ರತಿ ವರ್ಷವೂ ಆಯೋಜಿಸುವುದರಿಂದ ಪಂಚಾಯ್ತಿಗಳಲ್ಲಿ ನಡೆಯುವ ಅವ್ಯವಹಾರಗಳನ್ನು ತಡೆಗಟ್ಟಬಹುದು ಎನ್ನಲಾಗಿದೆ.

Leave a Reply

Your email address will not be published. Required fields are marked *