ಮಂಗಳೂರು: ಸೆಪ್ಟೆಂಬರ್ 20ರಂದು ಗಾಂಧಿ ಮರಿಮೊಮ್ಮಗ ತುಷಾರ್ ಗಾಂಧಿ ಮಂಗಳೂರಿಗೆ

ಮಂಗಳೂರು: ಮಹಾತ್ಮ ಗಾಂಧೀಜಿಯವರ ಮರಿಮಗ ಮತ್ತು ಖ್ಯಾತ ಸಾಮಾಜಿಕ ಚಿಂತಕ ತುಷಾರ್ ಗಾಂಧೀಯವರು ಸೆಪ್ಟೆಂಬರ್ 20ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಅಂದು ಬೆಳಗ್ಗೆ 10.30ಕ್ಕೆ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ನಡೆಯುವ ಸಮಾರಂಭವನ್ನು ಉದ್ಘಾಟಿಸಿ, ತುಷಾರ್ ಗಾಂಧೀಯವರು ‘ಇಂದಿನ ಯುವಜನತೆಗೆ ಗಾಂಧೀ ವಿಚಾರಧಾರೆಯ ಪ್ರಸ್ತುತತೆ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ. ಸಭಾಪತಿ ಯು.ಟಿ.ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿವಿ ಕುಲಪತಿ ಪಿ.ಎಲ್.ಧರ್ಮ ವಹಿಸಲಿದ್ದಾರೆ. ಕರ್ನಾಟಕ ಗಾಂಧೀ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ. ಕೃಷ್ಣ ದಿಕ್ಸೂಚಿ ಭಾಷಣ ಮಾಡಿದ್ದಾರೆ. ಈ ಸಂದರ್ಭ ಕುಂಬ್ರ ಜತ್ತಪ್ಪ ರೈ ಪ್ರತಿಷ್ಠಾನದ ಸಂಸ್ಥಾಪಕ ಪ್ರಮೋದ್ ಕುಮಾರ್ ರೈಯವರು ರಚಿಸಿರುವ ‘ಆನ್ ದ ಟ್ರೈಲ್ ಆಫ್ ಗಾಂಧೀಸ್ ಪುಟ್‌ಸ್ಟೆಪ್ಸ್’ ಹಾಗೂ ‘ಬಿಪೋರ್ ಐ ರಿಟರ್ನ್ ಟು ದ ಸೊಲ್’ ಕೃತಿಗಳನ್ನು ನಿಟ್ಟೆ ವಿ.ವಿ. ಸಹ ಕುಲಾಧಿಪತಿ ಡಾ.ಶಾಂತರಾಮ ಶೆಟ್ಟಿಯವರು ಅನಾವರಣಗೊಳಿಸಲಿದ್ದಾರೆ. ಕರ್ನಾಟಕ ಗಾಂಧೀ ಸ್ಮಾರಕ ನಿಧಿ, ಮಂಗಳೂರು ವಿಶ್ವವಿದ್ಯಾನಿಲಯ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಕುಂಬ್ರ ಜತ್ತಪ್ಪ ರೈ ಪ್ರತಿಷ್ಠಾನದ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಪ್ರತಿಷ್ಠಾನದ ಪ್ರಮೋದ್ ಕುಮಾರ್ ರೈ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply