ಉಡುಪಿ: ಬಸ್ರೂರು ಮೂರುಕೈ ಪಾಯಿಂಟ್‌ನಿಂದ ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಯ ಪ್ರಮುಖ ಸಂಪರ್ಕ ಕೊಂಡಿಯಾದ ಕುಂದಾಪುರ-ಸಿದ್ದಾಪುರ ರಾಜ್ಯ ಹೆದ್ದಾರಿ ಅಗಲೀಕರಣದ ಬೇಡಿಕೆ ನನೆಗುದಿಗೆ ಬಿದ್ದಿದ್ದು, ಸಿದ್ದಾಪುರ, ಅಂಪಾರು ಪೇಟೆ ಜಂಕ್ಷನ್ ಅಗಲೀಕರಣ ಹೊರತುಪಡಿಸಿ ರಾಜ್ಯ ಹೆದ್ದಾರಿ ಇಂದಿಗೂ ಗತಕಾಲದಲ್ಲೇ ಮುಂದುವರಿದಿದೆ. ಚತುಷ್ಪಥ ಹೆದ್ದಾರಿ ನಿರ್ಮಾಣ ವೇಳೆ ಕುಂದಾಪುರವನ್ನು ಸಂಧಿಸುವ ಈ ರಾಜ್ಯ ಹೆದ್ದಾರಿಯನ್ನು ಅಗಲೀಕರಣಗೊಳಿಸಬೇಕೆಂಬ ನಾಗರಿಕ ಹೋರಾಟ ಸಮಿತಿಯ ಬೇಡಿಕೆಗೆ ಈವರೆಗೆ ಸ್ಪಂದನೆ ಇಲ್ಲದಂತಾಗಿದೆ. ಆದ್ದರಿಂದ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಿ, ಅಗಲೀಕರಣ ಕಾಮಗಾರಿ ಕೈಗೊಳ್ಳುವ ಕುರಿತು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ವಿಧಾನ ಪರಿಷತ್ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಅವರು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಪತ್ರ ಮುಖೇನ ಒತ್ತಾಯಿಸಿದ್ದಾರೆ.
ಹೆದ್ದಾರಿಯ ಆರಂಭಿಕ ಸ್ಥಳ ಬಸ್ರೂರು ಮೂರುಕೈಯಿಂದ ಅಂಪಾರುವರೆಗಿನ ಹೆದ್ದಾರಿ ಇಕ್ಕಟ್ಟಾಗಿದೆ. ಅಗಲ ಕಿರಿದಾಗಿರುವುದು, ಹೆಚ್ಚುತ್ತಿರುವ ವಾಹನ ದಟ್ಟಣೆ, ಪೇಟೆಗಳು ಅಭಿವೃದ್ಧಿಯಾಗುತ್ತಿರುವ ಹಿನ್ನೆಲೆಯಲ್ಲಿ ಘನ ವಾಹನಗಳು ಎಚ್ಚರದಿಂದ ಸಂಚರಿಸಬೇಕಾದ ಅನಿವಾರ್ಯತೆ ಇದೆ.
ಈಗಾಗಲೇ ಹೆಮ್ಮಾಡಿ-ಕೊಲ್ಲೂರು ಮಾರ್ಗವು ರಾಷ್ಟ್ರೀಯ ಹೆದ್ದಾರಿಯಾಗಿ ಅಗಲೀಕರಣಗೊಂಡಿದೆ. ಕೋಟೇಶ್ವರ- ಹಾಲಾಡಿ-ವಿರಾಜಪೇಟೆ ಹೆದ್ದಾರಿಯೂ ಅಗಲೀಕರಣವಾಗಿದೆ. ಆದರೆ ಸಿದ್ದಾಪುರ-ಕುಂದಾಪುರ ರಾಜ್ಯ ಹೆದ್ದಾರಿ ಮಾತ್ರ ಇನ್ನೂ ಓಬಿರಾಯನ ಕಾಲದಲ್ಲಿದೆ. ಶಿವಮೊಗ್ಗ ಬೆಂಗಳೂರು ಸಂಪರ್ಕಿಸುವ ಪ್ರಮುಖ ಹೆದ್ದಾರಿ ಇದಾಗಿದ್ದರೂ ಈವರೆಗೆ ಅಭಿವೃದ್ಧಿ ಕಂಡಿಲ್ಲ, ರಸ್ತೆಯ ಇಕ್ಕೆಲಗಳಲ್ಲಿ ಹೆಚ್ಚುತ್ತಿರುವ ರಸ್ತೆ ಅತಿಕ್ರಮಣವನ್ನು ತಡೆಯದ ಇಲಾಖೆಯ ಅಧಿಕಾರಿಗಳ ವೈಫಲ್ಯತೆಯಿಂದಾಗಿ, ಮಳೆಗಾಲದಲ್ಲಿ ರಸ್ತೆಯ ಮೇಲೆ ಶೇಖರಿಸಲ್ಪಟ್ಟ ನೀರಿನಿಂದ ಉಂಟಾದ ಆಳವಾದ ಹೊಂಡಗಳಿಂದ ಹಾಗೂ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದ ನಾಗರಿಕರು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸಬೇಕಾಗಿದೆ.
ಆದ್ದರಿಂದ ಕುಂದಾಪುರ-ಸಿದ್ದಾಪುರ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿ, ರಸ್ತೆ ಅಗಲೀಕರಣ ಕಾಮಗಾರಿಯನ್ನು ಪ್ರಾರಂಭಿಸಲು ಆದೇಶಿಸಬೇಕೆಂದು ಶಾಸಕರು ಒತ್ತಾಯಿಸಿದ್ದಾರೆ.