
ಬೆಂಗಳೂರು: ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷಿ ಕೊಡುಗೆಯಾಗಿರುವ ಗೃಹಲಕ್ಷ್ಮೀ ಗ್ಯಾರಂಟಿಯ ಹಣ ವಿತರಣೆ ಅಸಮರ್ಪಕವಾಗಿರುವ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ತಾಲೂಕು ಪಂಚಾಯಿತಿಗಳ ಮೂಲಕ ಜಾರಿಗೊಳಿಸಲು ಸರಕಾರ ಮುಂದಾಗಿದೆ.



ಇಲ್ಲಿಯವರೆಗೆ ರಾಜ್ಯ ಕಾರ್ಯದರ್ಶಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕರ ಮೂಲಕ ಹಣ ಪಾವತಿಯಾಗುತಿತ್ತು. ಇನ್ನು ಮುಂದೆ ರಾಜ್ಯ ಕಾರ್ಯದರ್ಶಿಯಿಂದ ತಾಲೂಕು ಪಂಚಾಯಿತಿಗೆ ಹಣ ಪಾವತಿ ಆಗಲಿದೆ. ತಾಲೂಕು ಪಂಚಾಯಿತಿಯಿಂದ ನೇರವಾಗಿ ಫಲಾನುಭವಿಗಳಿಗೆ ಹಣ ತಲುಪಲಿದೆ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕರಿಗೆ ಇಲಾಖೆಯದ್ದೇ ಬಹಳಷ್ಟು ಜವಾಬ್ದಾರಿಯಿದೆ. ಈಗ ಗೃಹಲಕ್ಷ್ಮಿನಿಭಾಯಿಸುವುದು ಮತ್ತಷ್ಟು ಹೊರೆಯಾಗುತ್ತಿದೆ.
ಈ ಹೊರೆ ತಪ್ಪಿಸುವ ಸಲುವಾಗಿ ಬದಲಾವಣೆ ಮಾಡಲು ಇಲಾಖೆ ಮುಂದಾಗಿದೆ ಎನ್ನಲಾಗುತ್ತಿದೆ.ಕಳೆದ ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯುರ ಖಾತೆಗೆ ಬಂದಿಲ್ಲ. ಹೀಗಾಗಿ ಹಣ ಪಾವತಿಯ ಕಾರ್ಯವಿಧಾನದಲ್ಲೇ ಬದಲಾವಣೆ ಮಾಡಲು ಮುಂದಾಗಿದೆ. ಈ ವಿಚಾರದ ಬಗ್ಗೆ ಈಗ ಇಲಾಖೆ ಹಂತದಲ್ಲಿ ಚರ್ಚೆ ನಡೆಯುತ್ತಿದೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆರೋಗ್ಯ ಸ್ಥಿತಿ ಸುಧಾರಣೆಯಾದ ಬಳಿಕ ಅಧಿಕೃತ ಆದೇಶ ಪ್ರಕಟವಾಗುವ ಸಾಧ್ಯತೆಯಿದೆ.ರಾಜ್ಯ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಹಣದ ಕೊರತೆಯಾಗಿದೆ ಎಂದು ಕಾಂಗ್ರೆಸ್ ಶಾಸಕರೇ ಮಾತನಾಡಿಕೊಳ್ಳುತ್ತಿದ್ದಾರೆ. ಈಗ ಗೃಹಲಕ್ಷ್ಮಿ ಕಂತು ಪಾವತಿಗೂ ಹಣದ ಕೊರತೆ ಉಂಟಾಗಿದೆ. ಹೀಗಾಗಿ 3 ಕಂತು ಪಾವತಿ ಮಾಡಿಲ್ಲ ಎಂದು ಎಂದು ಮಹಿಳೆಯರು ಮಾತನಾಡಿಕೊಳ್ಳುತ್ತಿದ್ದಾರೆ.ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಹಣ ಪ್ರತಿ ತಿಂಗಳು ರೈತರ ಖಾತೆಗೆ ಜಮೆ ಆಗುತ್ತಿದೆ. ಇದು ದೇಶವ್ಯಾಪಿ ನಡೆಯುತ್ತಿರುವಾಗ ಗೃಹಲಕ್ಷ್ಮಿ ಹಣ ಪಾವತಿಗೆ ಕಷ್ಟ ಆಗಲಾರದು ಎಂದು ಸರಕಾರ ಭಾವಿಸಿದೆ.