ನಟಿ,ಮಾಡೆಲ್ ಉರ್ಫಿ ಜಾವೇದ್ ಬಂಧನದ ರೀತಿಯಲ್ಲಿ ವಿಡಿಯೋ ಡ್ರಾಮ ಮಾಡಿರುವುದರ ಬಗ್ಗೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಉರ್ಫಿ ಅವರನ್ನು ತುಂಡು ಬಟ್ಟೆಯನ್ನು ಧರಿಸಿರುವ ಕಾರಣದಿಂದಾಗಿ ಬಂಧಿಸಲಾಗಿದೆ ಎನ್ನಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮುಂಬೈನ ಓಶಿವಾರ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಇದು ಪ್ರಚಾರಕ್ಕಾಗಿ ಉರ್ಫಿ ಮಾಡಿರುವ ನಾಟಕ ಎನ್ನಲಾಗುತ್ತಿದೆ.
ಉರ್ಫಿ ಜಾವೇದ್ ವಿರುದ್ಧ ಓಶಿವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ಕುರಿತಂತೆ ನಕಲಿ ವಿಡಿಯೋ ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಮುಂಬೈ ಪೊಲೀಸರಿಗೆ ಮಾನಹಾನಿ ಮಾಡಿದ್ದಕ್ಕಾಗಿ ದೂರು ದಾಖಲಿಸಿಕೊಳ್ಳಲಾಗಿದೆ. ಘಟನೆಯ ಬಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರನ್ನು ಬಂಧಿಸಿದ್ದು, ವಿಡಿಯೋ ಚಿತ್ರೀಕರಣದ ವೇಳೆ ಬಳಸಿದ್ದ ಕಾರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಣ್ಣ ಬಟ್ಟೆ ಧರಿಸಿರುವ ಕಾರಣಕ್ಕೆ ಇಬ್ಬರು ಮಹಿಳಾ ಪೊಲೀಸ್ ಸಿಬ್ಬಂದಿ ಬಂಧಿಸಿರುವ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕೆಲ ನೆಟ್ಟಿಗರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರೆ. ಮತ್ತೆ ಕೆಲವರು ಪೊಲೀಸರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ವಿಡಿಯೋ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು ವಿಡಿಯೋದಲ್ಲಿ ಇರುವವರು ಮುಂಬೈ ಪೊಲೀಸರಲ್ಲ. ಅದು ನಮ್ಮ ಸಮವಸ್ತ್ರವೂ ಅಲ್ಲ. ತಪ್ಪು ದಾರಿಗೆ ಎಳೆದ ಈ ವಿಡಿಯೋ ಮಾಡಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದೇವೆ ಎಂದು ಹೇಳಿದ್ದಾರೆ.