ಮಂಗಳೂರು : ಕಳೆದ ನಾಲ್ಕು ವರ್ಷಗಳಿಂದ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಜನಪರ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳದೆ, ಈಗ ಕಾಂಗ್ರೆಸ್ ಸರ್ಕಾರದ ಮೇಲೆ ಆರೋಪ ಮಾಡುವ ಕೆಟ್ಟ ಚಾಳಿಯನ್ನು ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಆರಂಭಿಸಿದ್ದಾರೆ ಎಂದು ಮನಪಾ ಸದಸ್ಯ ಎ.ಸಿ.ವಿನಯ್ ರಾಜ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿ, ಖಾದರ್ 2018 ರಲ್ಲಿ ನಿಗದಿತ ಅವಧಿಯಲ್ಲಿ ನಿಗದಿತ ಬೆಲೆಗೆ ನೀಡಲು ಸ್ಯಾಂಡ್ ಬಜಾರ್ ಆ್ಯಪ್ ಮಾಡಿ ಜನರಿಗೆ ಮರಳು ಕೊಡಿಸಿದ್ದರು. 2019ರಲ್ಲಿ ಆ ವ್ಯವಸ್ಥೆಯನ್ನು ಸಂಪೂರ್ಣ ಕೆಡಿಸಿದ ಕೀರ್ತಿ ದ.ಕ.ಜಿಲ್ಲೆಯ ಎಂಎಲ್ಎಗಳು, ಎಂಪಿ ಹಾಗೂ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ. ಆ್ಯಪ್ ಕಿತ್ತೊಗೆದಾಗ ಜನರಿಗೆ ಮರಳು ಸಿಗುತ್ತಿರಲಿಲ್ಲ. ಆಗ ಶಾಸಕರಾದ ಕಾಮತ್, ಭರತ್ ಯಾಕೆ ಮೌನ ವಹಿಸಿದ್ದರು ಎಂದು ಪ್ರಶ್ನಿಸಿದರು. ಅಕ್ರಮದಲ್ಲಿ ಶಾಸಕರು, ಸಂಸದರು ಕೈಜೋಡಿಸಿದ್ದರು. ಶಂಭೂರು, ಅದ್ಯಪಾಡಿ ಡ್ಯಾಂನಲ್ಲಿ ಹೂಳೆತ್ತುವ ನೆಪದಲ್ಲಿ ಹಿಂಬಾಲಕರಿಗೆ ಅಕ್ರಮ ಮರಳುಗಾರಿಕೆಗೆ ವ್ಯವಸ್ಥೆ ಮಾಡಿದ್ದರು. ಅದರ ವಿರುದ್ಧ ಎನ್ ಜಿಟಿ 50 ಕೋಟಿ ರೂ. ದಂಡ ವಿಧಿಸಿತ್ತು. ಇದು ಅಕ್ರಮಕ್ಕೆ ಸಾಕ್ಷಿ. ಸಚಿವ ದಿನೇಶ್ ಗುಂಡೂರಾವ್ ಮರಳುಗಾರಿಕೆಗೆ ಅನುಮತಿ ನೀಡುವ ನಿಟ್ಟಿನಲ್ಲಿ ಪ್ರಕ್ರಿಯೆ ಮಾಡಿ ಸರ್ಕಾರಕ್ಕೆ ಕಳಿಸಿದ್ದರು. ಶೀಘ್ರ ಮರಳುಗಾರಿಕೆ ಪ್ರಾರಂಭವಾಗಲಿದೆ. ಸ್ಯಾಂಡ್ ಬಜಾರ್ ಮೂಲಕ ಮತ್ತೆ ಜನರಿಗೆ ಮರಳು ಸಿಗಲಿದೆ ಎಂದರು. ವೆನ್ಲಾಕ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರ ಕೆಟ್ಟು ಹೋಗಿದೆ. ಈ ಯಂತ್ರ ಕೊಟ್ಟಿದ್ದು ಸಿದ್ದು ಸರ್ಕಾರ. ಒಂದು ಯಂತ್ರದ ಕಾಲಾವಧಿ 30 ಸಾವಿರ ಗಂಟೆ. ಅದಕ್ಕೆ ಹೊಸದಾಗಿ 9 ಯಂತ್ರ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಬಿಜೆಪಿ ಅವಧಿಯಲ್ಲಿ ಯಂತ್ರ ಕೆಟ್ಟುಹೋದದ್ದು ಯಾಕೆ ಅವರಿಗೆ ಗೊತ್ತಾಗಲಿಲ್ಲ? ಈಗ ಒಂದು ಮೆಶಿನ್ ಕೊಡಲು ನಿಮಗೆ ಆಗಿಲ್ಲ ಈಗ ಆರೋಪ ಮಾಡ್ತಿದಾರೆ ಎಂದು ಕಿಡಿಕಾರಿದರು. ಕದ್ರಿ ಪಾರ್ಕ್ ರಸ್ತೆ ಅಭಿವೃದ್ಧಿ ಕಾಮತ್ ಮಾಡಿದ್ದಲ್ಲ, ಖಾದರ್ ಸಚಿವರಾಗಿದ್ದಾಗ ಮಾಡಿರುವ ಪ್ಲ್ಯಾನ್. ಬಿಜೆಪಿ ಅಧಿಕಾರ ಬಂದಾಗ ಅದರ ಷರತ್ತುಗಳನ್ನು ಬಿಟ್ಟು ಅವರ ಹಿಂಬಾಲಕರಿಗೆ ಮಳಿಗೆ ನೀಡಿದ್ದಾರೆ. ಎಸ್ಸಿ ಎಸ್ಟಿಗೆ ಸವಲತ್ತು ಬರ್ತಿಲ್ಲ ಹೇಳಿದ್ರು. ಎಸ್ಸಿ ಎಸ್ಟಿ ಆಧಾರದ ಮೇಲೆ ಬಜೆಟ್ ಮಂಡನೆ ಮಾಡಿದ್ದು ಸಿದ್ದು ಸರ್ಕಾರ, ಇವರಿಂದ ಪಾಠ ಕಲಿಬೇಕಾದ ಅಗತ್ಯಯಿಲ್ಲ ಎಂದು ಎ.ಸಿ.ವಿನಯ್ ರಾಜ್ ಹೇಳಿದರು.