ಕೋಮು ದ್ವೇಷ ಹರಡಿ ರಾಜಕೀಯ ಲಾಭ ಪಡೆಯಲು ಕಲ್ಲಡ್ಕ ಭಟ್ ಪ್ರಯತ್ನಿಸಿದ್ದಾರೆ-ರಮಾನಾಥ ರೈ

ಮಂಗಳೂರು : ಆರ್‌ಎಸ್‌ಎಸ್‌ ಮುಖಂಡ ಡಾ.ಕಲ್ಲಡ್ಕ ಭಟ್ ಬಂಧನವಾದಲ್ಲಿ ದ.ಕ.ಜಿಲ್ಲೆಯಲ್ಲಿ ಕೋಮು ಸಂಘರ್ಷವಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸುವುದಿಲ್ಲ, ಈ ಬಗ್ಗೆ ದ.ಕ.ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಸರ್ವ ಸನ್ನದ್ಧರಾಗಿದ್ದಾರೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದ್ದಾರೆ. ಮಂಗಳೂರಿನಲ್ಲಿ ನಡೆದ ದ.ಕ.ಜಿಲ್ಲಾ ಜಾತ್ಯಾತೀತ ಪಕ್ಷಗಳ ಸಂಘಟನೆಗಳ ಜಂಟಿ ವೇದಿಕೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಟ್ ಹೇಳಿಕೆಯನ್ನು ಯಾವ ಸಮುದಾಯದ ಮಹಿಳೆಯರು ಒಪ್ಪಲು ಸಾಧ್ಯವಿಲ್ಲ. ಮುಸ್ಲಿಂ ಮಹಿಳಾ ವರ್ಗಕ್ಕೆ ಮಾತ್ರವಲ್ಲ ಎಲ್ಲಾ ಸಮುದಾಯದ ಮಹಿಳೆಯರಿಗೆ ಅವಮಾನವಾಗಿದೆ.‌ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿಯವರಿಗೆ ಏನು ಮಾಡಬೇಕೆಂದು ತೋಚುತ್ತಿಲ್ಲ. ಆದ್ದರಿಂದ ಕೋಮು ಪ್ರಚೋದನೆಯ ಭಾಷಣ ಮಾಡುತ್ತಿದ್ದಾರೆ. ಕಲ್ಲಡ್ಕ ಭಟ್ ಬಂಧಿಸಬೇಕೆಂಬ ಆಗ್ರಹಕ್ಕೆ ದ.ಕ.ಜಿಲ್ಲೆಯ ಜನರೂ ಸಹಮತ ವ್ಯಕ್ತಪಡಿಸುತ್ತಾರೆ ಎಂದರು. ಕಲ್ಲಡ್ಕ ಭಟ್ ಹೇಳಿಕೆ ತಿರುಚಿದ್ದಾರೆಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ. ಆದರೆ, ಯಾವ ರೀತಿ ತಿರುಚಲಾಗಿದೆಯೆಂದು ಹೇಳಬೇಕು. ಕೋಮು ದ್ವೇಷ ಹರಡಿ ರಾಜಕೀಯ ಲಾಭ ಪಡೆಯಲು ಭಟ್‌ರು ಪ್ರಯತ್ನಿಸಿದ್ದಾರೆ. ಅವರ ವಿರುದ್ಧ ಈಗಾಗಲೇ ಜಾಮೀನು ರಹಿತ ಪ್ರಕರಣ ದಾಖಲೆಯಾಗಿದೆ. ಸರ್ಕಾರ ತಕ್ಷಣ ಕಲ್ಲಡ್ಕ ಪ್ರಭಾಕರ್ ಭಟ್ ರನ್ನು ಬಂಧನ ಮಾಡಬೇಕು. ಸರ್ಕಾರ ಈ ವಿಚಾರದಲ್ಲಿ‌ ವಿಳಂಬ ಮಾಡಬಾರದು. ಸರ್ಕಾರದ ಜೊತೆಗೆ ಸಮಾಜ ಇರಲಿದೆ ಎಂದು ಬಿ.ರಮಾನಾಥ್ ರೈ ಹೇಳಿದರು.

ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ‌ ಮಾತನಾಡಿ, ಬಿಜೆಪಿ ಸಂಘ, ಪರಿವಾರದವರು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿ, ಬಳಿಕ ಗಲಾಟೆಯನ್ನು ಮಾಡಿ ರಾಜಕೀಯ ಲಾಭ ಪಡೆಯುತ್ತದೆ‌‌. ಮುಸ್ಲಿಂ ಹೆಣ್ಣುಮಕ್ಕಳ ಸಮಸ್ಯೆ ಬಗ್ಗೆ ಬಿಜೆಪಿ, ಸಂಘಪರಿವಾರದ ಮುಖಂಡರಿಗೆ ಯಾಕೆ ತಲೆಬಿಸಿ. ಮೋದಿಯವರ ತ್ರಿಪಲ್ ತಲಾಖ್ ಜಾರಿಗೊಳಿಸಿದ ಉದ್ದೇಶವೇನು?‌ ಕಲ್ಲಡ್ಕ ಭಟ್ ಹೇಳಿದ ಕಾರಣಕ್ಕಾಗಿಯೇ ಮೋದಿ ಈ ಕಾನೂನು ತಂದಿದ್ದಾ ಹೇಳಲಿ. ಅವರ ಬಂಧನವಾದಲ್ಲಿ ಯಾವುದೇ ಸಮಸ್ಯೆ ಆಗಲ್ಲ. ದ.ಕ‌.ಜಿಲ್ಲೆಯಲ್ಲಿ ಬಹಳಷ್ಟು ಸಮಸ್ಯೆಗಳಿದೆ ಅದರ ಬಗ್ಗೆ ಯಾವತ್ತೂ ಕಲ್ಲಡ್ಕ ಪ್ರಭಾಕರ ಭಟ್ ಇಷ್ಟರವರೆಗೆ ಮಾತನಾಡಿಲ್ಲ. ಸರ್ಕಾರ ಪ್ರಭಾಕರ್ ಭಟ್ ರನ್ನು ಬಂಧಿಸಬೇಕು. ನಾವು ಸರ್ಕಾರದ ಜೊತೆ ನಿಲ್ಲುತ್ತೇವೆ ಎಂದರು.

Leave a Reply