ಇನ್‌ಸ್ಟಾಗ್ರಾಂನಲ್ಲಿ ತ್ರೀಕೊನ ಪ್ರೇಮ ಕಥೆ: ಒರ್ವ ಯುವಕನನ್ನು 50 ಬಾರಿ ಇರಿದು ಕೊಲೆ

ನವದೆಹಲಿ: ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಹುಡುಗಿಯೊಬ್ಬಳಿಗಾಗಿ 18 ವರ್ಷದ ಯುವಕನೊಬ್ಬ 20 ವರ್ಷದ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಸುಮಾರು 50 ಬಾರಿ ಚಾಕುವಿನಿಂದ ಇರಿದು ಯುವಕನನ್ನು ಕೊಲೆ ಮಾಡಿರುವ ಘಟನೆ ದೆಹಲಿಯ ಭಗೀರಥಿ ವಿಹಾರದಲ್ಲಿ ನಡೆದಿದೆ.

ಮಹೀರ್‌ ಅಲಿಯಾಸ್ ಇಮ್ರಾನ್ (20) ಹತ್ಯೆಗೀಡಾಗಿದ್ದಾನೆ. ಪ್ರೀತಿಗಾಗಿ ಅರ್ಮಾನ್‌ ಎಂಬಾತನೇ ಮಹೀರ್‌ನನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸ್‌ ತನಿಖೆಯಲ್ಲಿ ತಿಳಿಸಲಾಗಿದೆ. ಪೈಸಲ್‌ ಹಾಗೂ ಸಮೀರ್‌ ಎಂಬ ಗೆಳೆಯರ ಜತೆ ಭಗೀರಥಿ ವಿಹಾರಕ್ಕೆ ಬಂದಿದ್ದ ಅರ್ಮಾನ್‌, ಮಹೀರ್‌ಗೆ 50 ಬಾರಿ ಚಾಕುವಿನಿಂದ ಇರಿದಿದ್ದಾನೆ. ಮೂವರು ಸೇರಿ ಸತತವಾಗಿ ಚಾಕುವಿನಿಂದ ಇರಿದ ಪರಿಣಾಮ ಮಹೀರ್‌ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಹೀರ್‌ಗೆ ಇನ್‌ಸ್ಟಾಗ್ರಾಂನಲ್ಲಿ 21 ವರ್ಷದ ಯುವತಿಯ ಪರಿಚಯವಾಗಿತ್ತು. ಬಳಿಕ ಇಬ್ಬರೂ ಫೋನ್‌ನಲ್ಲಿ ಗಂಟೆಗಟ್ಟಲೆ ಮಾತನಾಡುತ್ತಿದ್ದರು. ವಿಡಿಯೊ ಕಾಲ್‌ ಕೂಡ ಮಾಡುತ್ತಿದ್ದರು. ಯುವತಿ ಜೊತೆ ಈಗಾಗಲೇ ಪ್ರೀತಿಯಲ್ಲಿದ್ದ ಅರ್ಮಾನ್‌ಗೆ ಇದು ಸಹಿಸಲಾಗಲಿಲ್ಲ. ನನ್ನ ಗರ್ಲ್‌ಫ್ರೆಂಡ್‌ ಇಂದ ದೂರವಿರು ಎಂದು ಮಹೀರ್‌ಗೆ ಅರ್ಮಾನ್‌ ಎಚ್ಚರಿಕೆ ನೀಡಿದ್ದಾನೆ. ಆದರೂ, ಯುವತಿ ಹಾಗೂ ಮಹೀರ್‌ ಮಧ್ಯೆ ಮೊಬೈಲ್‌ನಲ್ಲಿ ಚಾಟಿಂಗ್‌, ಗಂಟೆಗಟ್ಟಲೆ ಮಾತುಕತೆ ಮುಂದುವರಿದಿದೆ.

ಯುವತಿ ಹಾಗೂ ಮಹೀರ್‌ ಫೋನ್‌ನಲ್ಲಿ ವಿಡಿಯೊ ಕಾಲ್ ಮೂಲಕ ಮಾತನಾಡುವಾಗಲೇ ಯುವತಿಯಿಂದ ಮೊಬೈಲ್‌ ಕಸಿದುಕೊಂಡ ಅರ್ಮಾನ್‌, ಮಹೀರ್‌ಗೆ ಫೋನ್‌ನಲ್ಲಿಯೇ ಎಚ್ಚರಿಕೆ ನೀಡಿದ್ದಾನೆ. ಇಷ್ಟಾದರೂ ಇಬ್ಬರ ಮಧ್ಯೆ ಮಾತುಕತೆ ಮುಂದುವರಿದ ಕಾರಣ ಮಹೀರ್‌ ಇರುವ ಜಾಗಕ್ಕೆ ಅರ್ಮಾನ್‌ ತೆರಳಿ ಚಾಕು ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅರ್ಮಾನ್‌ ಹಾಗೂ ಆತನ ಇಬ್ಬರು ಗೆಳೆಯರು ಸೇರಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

Leave a Reply