ಸುಳ್ಯ: ಸ್ವಾರ್ಥರಹಿತ ಸಮಾಜದ, ದೇಶದ ಅಭಿವೃದ್ಧಿಗಾಗಿ ನಾವು ಶ್ರಮಿಸುತ್ತೇವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.
ಸುಳ್ಯದ ಹಳೆಗೇಟಿನಿಂದ ಖಾಸಗಿ ಬಸ್ ನಿಲ್ದಾಣದವರೆಗೆ ರೋಡ್ ಶೋ ಬಳಿಕ ನಡೆದ ಕಾರ್ನರ್ ಮೀಟಿಂಗ್ ನಲ್ಲಿ ಮಾತನಾಡಿದರು. ನಾವೆಲ್ಲಾ ಸದೃಢ ಭಾರತ ಆಗಬೇಕು, ಭಾರತ ವಿಶ್ವಗುರು ಆಗಬೇಕು ಎಂಬ ಆಶಯ ಹೊಂದಿದ್ದೇವೆ. ಇದಕ್ಕಾಗಿ ಮೊದಲು ನಮ್ಮ ಮನೆ, ಸಮಾಜ ಸದೃಢಗೊಳ್ಳಬೇಕು. ಯುವ ಜನಾಂಗ ಊರು ಬಿಟ್ಟು ಬೇರೆ ಪಟ್ಟಣಗಳಿಗೆ ವಲಸೆ ಹೋಗುವಂತೆ ಆಗಬಾರದು. ಹಾಗಾಗಿ ನಮ್ಮ ಊರಿನಲ್ಲೇ ಉದ್ದಿಮೆಗಳ ಸೃಷ್ಟಿ ಆಗಬೇಕಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಶ್ರಮಿಸಲಿದೆ ಎಂದರು.
ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಗ್ಯಾರೆಂಟಿ ಯೋಜನೆಗಳು ಶೇ. 99ರಷ್ಟು ಮಂದಿಗೆ ತಲುಪಿದೆ. ಉಳಿದ 1 ಶೇ. ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಗ್ಯಾರೆಂಟಿ ಯೋಜನೆಯಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಹೇಳಿದ್ದ ಬಿಜೆಪಿ ಇದೀಗ ತನ್ನದು ಒಂದು ಗ್ಯಾರೆಂಟಿ ಇರಲಿ ಎಂದು ಸೇರಿಸಿದೆ. ಈಗ ದೇಶ ದಿವಾಳಿಯಾಗುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಬಡವರ ಪರವಾಗಿರುವ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರನ್ನು ಗೆಲ್ಲಿಸಿಕೊಡುವಂತೆ ಮನವಿ ಮಾಡಿಕೊಂಡರು.
ಇದೇ ಸಂದರ್ಭ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು. ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಸುಳ್ಯ ಚುನಾವಣಾ ಉಸ್ತುವಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಜಿ. ಕೃಷ್ಣಪ್ಪ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಂ ಸ್ವಾಗತಿಸಿದರು.
ಬೃಹತ್ ರೋಡ್ ಶೋ:
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಏ.19ರಂದು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದು, ಬೆಳಿಗ್ಗೆ ಸುಳ್ಯದಲ್ಲಿ ಬೃಹತ್ ರೋಡ್ ಶೋ ನಡೆಸಿದರು.
ಹಳೆಗೇಟಿನಿಂದ ಆರಂಭಗೊಂಡ ರೋಡ್ ಶೋದಲ್ಲಿ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹಾಗೂ ಕಾಂಗ್ರೆಸ್ ಮುಖಂಡರು ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ಹಳೆಗೇಟು ಪೆಟ್ರೋಲ್ ಪಂಪ್ ಬಳಿಯಿಂದ ಆರಂಭಗೊಂಡ ರೋಡ್ ಶೋ ನಗರದಲ್ಲಿ ಪ್ರಯಾಣಿಸಿ ಮತ ಯಾಚನೆ ನಡೆಸಿದರು. ಬಸ್ ನಿಲ್ದಾಣದ ಮೂಲಕ ಮುಖ್ಯ ರಸ್ತೆಯಲ್ಲಿ ಹಾದು ಬಂದ ರೋಡ್ ಶೋ ಗಾಂಧಿನಗರ ತನಕ ನಡೆಯಿತು.
ಪಾದಯಾತ್ರೆಯ ಮೂಲಕ ವಾಹನಗಳಲ್ಲಿ ಕಾರ್ಯಕರ್ತರು, ನಾಯಕರು ರೋಡ್ ಶೋದಲ್ಲಿ ಭಾಗವಹಿಸಿದರು. ಚೆಂಡೆ ವಾದ್ಯ ಮೇಳಗಳೊಂದಿಗೆ ರೋಡ್ ಶೋ ನಡೆಯಿತು.
ಮುಖಂಡರಾದ ವೆಂಕಪ್ಪ ಗೌಡ, ಟಿ.ಎಂ.ಶಹೀದ್, ಧನಂಜಯ ಅಡ್ಪಂಗಾಯ, ಭರತ್ ಮುಂಡೋಡಿ, ಎನ್.ಜಯಪ್ರಕಾಶ್ ರೈ, ಅಧ್ಯಕ್ಷ ಸದಾನಂದ ಮಾವಜಿ, ಎಂ.ವೆಂಕಪ್ಪ ಗೌಡ, ಸರಸ್ವತಿ ಕಾಮತ್, ರಾಜೀವಿ ರೈ, ಎಸ್.ಸಂಶುದ್ದೀನ್, ಶಾಹುಲ್ ಹಮೀದ್ ಕುತ್ತಮೊಟ್ಟೆ, ಕೆ.ಎಂ.ಮುಸ್ತಫ, ಪಿ.ಎಸ್.ಗಂಗಾಧರ, ರಾಜೀವಿ ರೈ, ಗೀತಾ ಕೋಲ್ಚಾರ್, ಬೆಟ್ಟ ರಾಜಾರಾಮ್ ಭಟ್, ಬೆಟ್ಟ ಜಯರಾಮ ಭಟ್, ಇಕ್ಬಾಲ್ ಎಲಿಮಲೆ, ಕೆ.ಎಸ್.ಉಮ್ಮರ್, ಕಿರಣ್ ಬುಡ್ಲೆಗುಡ್ಡೆ, ಗೋಕುಲ್‌ದಾಸ್, ರಹೀಂ ಬೀಜದಕಟ್ಟೆ, ಶಾಫಿ ಕುತ್ತಮೊಟ್ಟೆ, ಸಿದ್ದಿಕ್ ಕೊಕ್ಕೊ, ಶರೀಫ್ ಕಂಠಿ, ಆಮ್ ಆದ್ಮಿ ಪಕ್ಷದ ಅಶೋಕ್ ಅಡಮಲೆ ಮತ್ತಿತರರು ಉಪಸ್ಥಿತರಿದ್ದರು.