ಮಂಗಳೂರು: ಮುತ್ತು ಗೋಪಾಲ್ ಫಿಲ್ಮ್ಸ್ ಬಾರ್ಕೂರು ಲಾಂಛನದಲ್ಲಿ ತಯಾರಾದ “ಗಬ್ಬರ್ ಸಿಂಗ್’ ತುಳು ಚಲನಚಿತ್ರ ಮೇ 3ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ.
ಚಿತ್ರ ನಿರ್ಮಾಪಕ ಸತೀಶ್ ಪೂಜಾರಿ ಬಾರ್ಕೂರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನೆಮಾಸ್, ಸಿನೆಪೊಲೀಸ್, ಪಿವಿಆರ್, ಉಡುಪಿಯ ಕಲ್ಪನಾ ಭಾರತ್ ಸಿನೆಮಾಸ್, ಮಣಿಪಾಲದ ಐನಾಕ್ಸ್, ಭಾರತ್ ಸಿನೆಮಾಸ್, ಸುರತ್ಕಲ್‌ನ ಸಿನೆಗ್ಯಾಲಕ್ಸಿ, ಪಡುಬಿದ್ರಿಯ ಭಾರತ್ ಸಿನೆಮಾಸ್, ಕಾರ್ಕಳದ ರಾಧಿಕಾ, ಪ್ಲಾನೆಟ್, ಪುತ್ತೂರಿನ ಭಾರತ್ ಸಿನೆಮಾಸ್, ಬೆಳ್ತಂಗಡಿಯ ಭಾರತ್ ಚಿತ್ರ ಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.
“ಗಬ್ಬರ್ ಸಿಂಗ್’ ವಿಭಿನ್ನ ಕತೆಯನ್ನೊಳ ಗೊಂಡಿದ್ದು, ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೊಂದನ್ನು ಆಧರಿಸಿ ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಕತೆ ಹೆಣೆಯಲಾಗಿದೆ. ಉತ್ತಮ ಕತೆ, ನವಿರಾದ ಹಾಸ್ಯದೊಂದಿಗೆ ಸಿನೆಮಾ ಚೆನ್ನಾಗಿ ಮೂಡಿ ಬಂದಿದೆ.
ಸಿನೆಮಾದಲ್ಲಿ 6 ಹಾಡುಗಳಿವೆ. ಸುರತ್ಕಲ್, ಚಿತ್ರಾಪುರ, ಬೈಕಂಪಾಡಿ ಮೊದಲಾದ ಪ್ರದೇಶಗಳಲ್ಲಿ ಸಿನೆಮಾಕ್ಕೆ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಾಯಕ ನಟನಾಗಿ ಶರಣ್ ಶೆಟ್ಟಿ ನಾಯಕಿಯಾಗಿ ವೆನ್ಸಿಟಾ ಅಭಿನಯಿಸಿದ್ದಾರೆ ಎಂದ ಹೇಳಿದರು.
ಚಿತ್ರ ನಟ ಭೋಜರಾಜ ವಾಮಂಜೂರು ಮಾತನಾಡಿ, ಕತೆ ಚಿತ್ರಕತೆ ಸತೀಶ್ ಪೂಜಾರಿ ಬಾರ್ಕೂರು ಅವರದ್ದಾಗಿದ್ದು ನಿರ್ದೇಶನದ ಜವಾಬ್ದಾರಿಯನ್ನು ಪ್ರದೀಪ್ ವಹಿಸಿಕೊಂಡಿದ್ದಾರೆ. ಮಧು ಸುರತ್ಕಲ್ ಸಂಭಾಷಣೆ ರಚಿಸಿದ್ದಾರೆ.
ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಾಯಿಕೃಷ್ಣ, ಉಮೇಶ್ ಮಿಜಾರು, ರವಿ ರಾಮಕುಂಜ, ಗಿರೀಶ್ ಎಂ. ಶೆಟ್ಟಿ ಕಟೀಲು, ವೀಣಾ ಶೆಟ್ಟಿ ಉಡುಪಿ, ಅಥರ್ವ ಪ್ರಕಾಶ್, ಉದಯ ಆಳ್ವ ಇಡ್ಯಾ, ಸಂದೀಪ್ ಭಕ್ತ, ಕಿರಣ್ ಮಲ್ಪೆ, ಪೂರ್ಣಿಮಾ ಶೆಟ್ಟಿ, ಪವಿತ್ರ ಶೆಟ್ಟಿ, ಚಂದ್ರಹಾಸ ಶೆಟ್ಟಿ ಮಾಣಿ, ಸಂಪತ್ ಲೋಬೋ, ಆಶಾ ಶೆಟ್ಟಿ ಶಿಬರೂರು, ಲಹರಿ ಶೆಟ್ಟಿ ಪಡ್ರೆ, ಶಿಲ್ಪಾ ಶೆಟ್ಟಿ, ಭವ್ಯಾ ಶೆಟ್ಟಿ ಸುರತ್ಕಲ್ ಸಂತೋಷ್, ಚಂದ್ರಹಾಸ ಶೆಟ್ಟಿ ಕಪ್ಪೆಟ್ಟು, ಫ್ರಾಂಕಿ ಕೊಳಲಗಿರಿ, ಉಮೇಶ್ ಶೆಟ್ಟಿ ಹಾವಂಜೆ, ಬೇಬಿ ಆಧ್ಯಾ ಉಡುಪಿ ಮೊದಲಾದವರಿದ್ದಾರೆ ಎಂದು ತಿಳಿದು ಬಂದಿದೆ.