ಮಂಗಳೂರು : ಫೇಸ್‌ಬುಕ್‌ನಲ್ಲಿ ಪರಿಚಿತನಾದ ವ್ಯಕ್ತಿಯೊಬ್ಬ ಬಿಟ್ ಕಾಯಿನ್‌ನಲ್ಲಿ ಹೂಡಿಕೆ ಮಾಡುವಂತೆ ನೀಡಿದ ಸಲಹೆಯಂತೆ ಹೂಡಿಕೆ ಮಾಡಿರುವ ವ್ಯಕ್ತಿಯೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿ ವಿಯಕಾ ವೆಬ್‌ಸೈಟ್‌ನಲ್ಲಿ ಸೇರಲು ಸೂಚಿಸಿದ್ದಾನೆ. ಅದರಂತೆ 75 ಜನರಿದ್ದ ಗ್ರೂಪ್‌ನಲ್ಲಿ 3 ಲಕ್ಷ ರೂ. ಹೂಡಿಕೆ ಮಾಡಿದ್ದರು. ಇದರಿಂದ 20 ಲಕ್ಷ ರೂ.ವರೆಗೆ ಲಾಭ ಬಂದಿತ್ತು. ಮತ್ತೆ ಆತನ ಶಿಫಾರಸಿನಂತೆ ವ್ಯವಹಾರ ಮಾಡಿ ಎಲ್ಲವನ್ನು ಕಳೆದುಕೊಂಡಿದ್ದರು. ಈ ಬಗ್ಗೆ ಆತನಲ್ಲಿ ಕೇಳಿದಾಗ ಎಕ್ಸ್‌ಚೇಂಜ್‌ನಲ್ಲಿ ಹೊಸ ಕಾಯಿನ್ (ಶೇರ್ ತರಹ) ಬಿಡುಗಡೆ ಆಗುತ್ತಿದೆ ಅದಕ್ಕೆ ಅಪ್ಲೈ ಮಾಡಿದರೆ ಬಹಳ ಲಾಭ ಬರುತ್ತದೆ ಎಂದು ನಂಬಿಸಿದ್ದನು. ಕಳೆದುಕೊಂಡಿರುವ ಹಣವನ್ನು ಮತ್ತೆ ಗಳಿಸುವ ಉದ್ದೇಶದಿಂದ ಬ್ಯಾಂಕ್‌ನಲ್ಲಿ ಚಿನ್ನಾಭರಣ ಅಡವಿಟ್ಟು ಸಾಲ ಮಾಡಿದ್ದರು. ವಿಯಕಾ ಕಸ್ಟಮರ್ ಕೇರ್ ಎಂದು ಪರಿಚಯಿಸಿಕೊಂಡಿದ್ದ ರವಿ ಕುಮಾರ್‌ನ ಸೂಚನೆಯಂತೆ 16,29,410 ರೂ. ಹೂಡಿಕೆ ಮಾಡಿದ್ದರು. ಇದರಲ್ಲಿ ಬಹಳ ಲಾಭ ಕಂಡು ಬಂದಿದೆ. ಅದನ್ನು ತೆಗೆಯಲು ಹೋದಾಗ ಜೂನ್.23ವರೆಗೆ ಡೆಪಾಸಿಟ್ ಮೊಬಿಲೈಸೇಶನ್ ಅವಧಿ ಆಗಿರುವುದರಿಂದ ತೆಗೆಯಲು ಆಗುವುದಿಲ್ಲ ಎಂದು ಬಂದಿದೆ. ಜೂ. 24ರಂದು ಮತ್ತೆ ತೆಗೆಯಲು ಹೋದಾಗ ಭಾರತದಲ್ಲಿ ಕಪ್ಪು ಹಣದ ಹಾವಳಿಯಿದೆ. ತಮ್ಮಲ್ಲಿ ಇರುವ ಎಲ್ಲ ಕಾಯಿನ್‌ಗಳನ್ನು ಮಾರಿ ಬಿಡಿ ಎಂದಿದ್ದಾರೆ. ಅದರಂತೆ ಮಾಡಿದ ಬಳಿಕ ವೆರಿಫಿಕೇಶನ್ ಆಗಿ ಪ್ರೊಸೆಸ್ ಆಗಬೇಕು. ಅದಕ್ಕೆ ಶೇ.10ರಷ್ಟು ದುಡ್ಡು ಕಟ್ಟಬೇಕು ಎಂದು ತಿಳಿಸಿದ್ದಾರೆ. ದೂರುದಾರರು ತನ್ನಲ್ಲಿ ಅಷ್ಟು ಮೊತ್ತವಿಲ್ಲ ಎಂದು ಹೇಳಿದಾಗ, ಹಾಗಾದರೆ ನಿನ್ನ ಎಲ್ಲ ಬ್ಯಾಲೆನ್ಸ್ ಮುಟ್ಟುಗೋಲು ಹಾಕುತ್ತಾರೆ ಎಂದು ಹೆದರಿಸಿದ್ದಾನೆ. ವಂಚನೆಗೊಳಗಾದ ವ್ಯಕ್ತಿ ಹೂಡಿಕೆ ಮಾಡಿದ ಹಣವನ್ನು ಮರಳಿ ನೀಡದೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.