ವಂಚನೆ ಪ್ರಕರಣ: ಚೈತ್ರಾಳಿಗೆ ಸೇರಿದ ಕೋಟ್ಯಂತರ ರೂ. ಮೌಲ್ಯದ ಸೊತ್ತು ಮುಟ್ಟುಗೋಲು…

ಬೆಂಗಳೂರು: ಬಿಜೆಪಿ ಟಿಕೆಟ್ ಕೊಡಿಸುವ ನೆಪದಲ್ಲಿ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ 5 ಕೋಟಿ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತೆ ಚೈತ್ರಾ ಕುಂದಾಪುರಗೆ ಸೇರಿದ ಕೋಟ್ಯಂತರ ರೂ. ಮೌಲ್ಯದ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದೇ ವೇಳೆ ಮತ್ತೊಬ್ಬ ಆರೋಪಿ ಉಡುಪಿ ಜಿಲ್ಲೆಯ ಪ್ರಸಾದ್ ಬೈಂದೂರುನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸರ್ಚ್ ವಾರೆಂಟ್ ಪಡೆದು ಶೋಧನೆ ನಡೆಸಿದ ಸಿಸಿಬಿ ಪೊಲೀಸರು ಉಡುಪಿಯ ಉಪ್ಪೂರು ಶ್ರೀರಾಮ ಸೊಸೈಟಿಯ ಬ್ಯಾಂಕ್ ಲಾಕರ್​ನಲ್ಲಿ ಇಟ್ಟಿದ್ದ ಆಸ್ತಿ ಪತ್ರ, ಬಂಗಾರವನ್ನು ಪತ್ತೆ ಮಾಡಿದ್ದಾರೆ. 1.8 ಕೋಟಿ ರೂ. ಮೌಲ್ಯದ ಆಸ್ತಿ ಪತ್ರ, 40 ಲಕ್ಷ ನಗದು, 65 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. ಚೈತ್ರಾ ಸ್ನೇಹಿತ ಶ್ರೀಕಾಂತ್ ಹೆಸರಿನಲ್ಲಿ ಬ್ಯಾಂಕ್​ನಲ್ಲಿ ಹಣ, ಚಿನ್ನ ಇಟ್ಟಿದ್ದಳು.

ಅಲ್ಲದೆ ಶ್ರೀಕಾಂತ್ ಹೆಸರಲ್ಲಿ ಉಡುಪಿಯ ಹಿರಿಯಡ್ಕದಲ್ಲಿ ಎರಡು ಅಂತಸ್ತಿನ ಮನೆ ಕಟ್ಟಿಸುತ್ತಿದ್ದಳು. ಪ್ರಸಾದ್ ಬೈಂದೂರನ್ನು ಎರಡು ದಿನದ ಹಿಂದೆ ವಿಚಾರಣೆ ನಡೆಸಿ ಕಳುಹಿಸಿದ್ದ ಸಿಸಿಬಿ ಪೊಲೀಸರು, ಆತನನ್ನು ಮತ್ತೆ ವಶಕ್ಕೆ ಪಡೆದಿದ್ದಾರೆ.

ಚೈತ್ರಾ ಕುಂದಾಪುರ ಹಿರಿಯಡ್ಕದಲ್ಲಿ 20 ಸೆಂಟ್ಸ್ ಜಾಗ ಖರೀದಿಸಿ ಮನೆ ಕಟ್ಟಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಗೆಳೆಯ ಶ್ರೀಕಾಂತ್ ನಾಯಕ್ ಹೆಸರಿನಲ್ಲಿ ಸೆಂಟ್ಸ್​ಗೆ 50 ಸಾವಿರ ರೂ. ನೀಡಿ ಜಾಗ ಖರೀದಿಸಲಾಗಿದ್ದು, ಎರಡು ಅಂತಸ್ತಿನ ಮನೆ ನಿರ್ಮಾಣ ಮಾಡುತ್ತಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಂದನೇ ಅಂತಸ್ತಿನ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.

Leave a Reply