ಸಿಸಿಬಿ ಕಾರ್ಯಾಚರಣೆ: ಮಾದಕ ವಸ್ತು ಸಹಿತ ಇಬ್ಬರ ಬಂಧನ-15 ದಿನಗಳ ಹಿಂದಷ್ಟೇ ಜೈಲಿನಿಂದ ರಿಲೀಸ್ ಆಗಿದ್ದ ಆರೋಪಿಗಳು

ಮಂಗಳೂರು: ನಗರವನ್ನು ಡ್ರಗ್ಸ್ ಫ್ರೀ ಮಂಗಳೂರು ಮಾಡುವ ನಿಟ್ಟಿನಲ್ಲಿ ಮಹತ್ವದ ಕಾರ್ಯಾಚರಣೆ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ನಿಷೇದಿತ ಮಾದಕದ್ರವ್ಯ ಎಂಡಿಎಂಎಯನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಉಪ್ಪಿನಂಗಡಿ, ತೆಕ್ಕಾರು ನಿವಾಸಿ ಪಿ.ಎಸ್. ಅಬ್ದುಲ್ ಅಜೀಜ್(31), ಸುರತ್ಕಲ್, ಕಾಟಿಪಳ್ಳ 3ನೇ ಬ್ಲಾಕ್, ಆಶ್ರಯ ಕಾಲನಿ ನಿವಾಸಿ ಅಕ್ಷಿತ್ ಕುಮಾರ್(26) ಬಂಧಿತ ಆರೋಪಿಗಳು. ಅಬ್ದುಲ್ ಅಜೀಜ್ ಹಾಗೂ ಅಕ್ಷಿತ್ ಕುಮಾರ್ ಮಂಗಳೂರು ನಗರದ ಕೆ ಎಸ್ ರಾವ್ ರಸ್ತೆ ಪರಿಸರದಲ್ಲಿ ಮಾದಕದ್ರವ್ಯ ಎಂಡಿಎಂಎಯನ್ನು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿಯನ್ವಯ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿದೆ. ಬಳಿಕ ಅವರ ವಶದಲ್ಲಿದ್ದ 35 ಗ್ರಾಂ ತೂಕದ, 1,75,000 ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಬಂಧಿತರಿಂದ ಎರಡುವಮೊಬೈಲ್ ಫೋನ್ ಗಳು, ನಗದು 600 ರೂ. ನಗದು, ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 1,96,000 ರೂ. ಆಗಬಹುದೆಂದು ಅಂದಾಜಿಸಲಾಗಿದೆ. ಆರೋಪಿಗಳ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ. ಆರೋಪಿಗಳ ಪೈಕಿ ಅಬ್ದುಲ್ ಅಜೀಜ್ ಎಂಬಾತ ಈ ಹಿಂದೆ ಉಪ್ಪಿನಂಗಡಿ, ವಿಟ್ಲ ಹಾಗೂ ಉರ್ವಾ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿ ಜೈಲುಪಾಲಾಗಿದ್ದ. 15 ದಿನಗಳ ಹಿಂದೆಯಷ್ಟೇ ಆತ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದ. ಇದೀಗ ಮತ್ತೆ ಅದೇ ಮಾದಕ ವಸ್ತು ಮಾರಾಟ ದಂಧೆ ನಡೆಸುತ್ತಿದ್ದಾನೆ.

Leave a Reply