Visitors have accessed this post 354 times.
ನವದೆಹಲಿ : ಹಳೆಯ ಪಾರ್ಲಿಮೆಂಟ್ ಬಿಟ್ಟು ಹೊಸದಾಗಿ ನಿರ್ಮಾಣವಾದ ಲೋಕಸಭೆ ಕಟ್ಟಡದಲ್ಲೂ ಮತ್ತೆ ಹಳೆ ಚಾಳಿಯನ್ನು ಜನಪ್ರತಿನಿಧಿಗಳು ಮುಂದುವರೆಸಿದ್ದು, ಇದೀಗ ಬಿಜೆಪಿ ಸಂಸದರೊಬ್ಬರು ಬಿಎಸ್ ಪಿ ಮುಸ್ಲಿಂ ಸಂಸದನನ್ನು “ಭರ್ವಾ (ಪಿಂಪ್), “ಮುಲ್ಲಾ” “ಆತಂಕವಾದಿ”(ಭಯೋತ್ಪಾದಕ) ಮತ್ತು “ಉಗ್ರವಾದಿ” (ಉಗ್ರವಾದಿ) ಎಂದು ನಿಂದಿಸಿದ್ದಾರೆ.
ಭಾರತದ ಚಂದ್ರಯಾನ-3 ರ ಯಶಸ್ಸಿನ ಚರ್ಚೆಯ ವೇಳೆ ಮಾತನಾಡಿದ ಬಿಜೆಪಿ ಸಂಸದ ರಮೇಶ್ ಬಿಧುರಿ ಅವರು ಡ್ಯಾನಿಶ್ ಅಲಿ ಅವರನ್ನು ಭಯೋತ್ಪಾದಕ, ಉಗ್ರಗಾಮಿ ಮತ್ತು ಪಿಂಪ್ ಎಂದು ಕರೆದಿದ್ದಾರೆ. ಈ ‘ಮುಲ್ಲಾ’ ನನ್ನು ಹೊರಹಾಕಿ. “ಈ ಮುಲ್ಲಾ ಒಬ್ಬ ಭಯೋತ್ಪಾದಕ” ಎಂದು ಬಿಧುರಿ ಟೀಕಿಸಿದ್ದಾರೆ. ಗುರುವಾರ ಲೋಕಸಭೆಯಲ್ಲಿ ಚಂದ್ರಯಾನ-3 ಮಿಷನ್ ಕುರಿತ ಚರ್ಚೆಯ ವೇಳೆ ಬಹುಜನ ಸಮಾಜ ಪಕ್ಷದ ಸಂಸದ ಡ್ಯಾನಿಶ್ ಅಲಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಭಾರತೀಯ ಜನತಾ ಪಕ್ಷದ ರಮೇಶ್ ಬಿಧುರಿ ಭಾರೀ ರಾಜಕೀಯ ಗದ್ದಲ ಎಬ್ಬಿಸಿದ್ದು, ಸ್ಪೀಕರ್ ಓಂ ಬಿರ್ಲಾ ಅವರು ಬಿಜೆಪಿ ಸದಸ್ಯರಿಗೆ ಎಚ್ಚರಿಕೆ ನೀಡಿದ್ದಾರೆ. ಇಂತಹ ವರ್ತನೆ ಪುನರಾವರ್ತನೆಯಾದಲ್ಲಿ “ಕಠಿಣ ಕ್ರಮ” ಎಂದು ಬಿಧುರಿಗೆ ಬಿರ್ಲಾ ಎಚ್ಚರಿಕೆ ನೀಡಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಲೋಕಸಭೆಯಲ್ಲಿ “ಆಕ್ಷೇಪಾರ್ಹ” ಹೇಳಿಕೆಗಳಿಗೆ ವಿಷಾದ ವ್ಯಕ್ತಪಡಿಸಿದರೆ, ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಸಂಸತ್ತಿನ ಕೆಳಮನೆಯಿಂದ ಬಿಧುರಿ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದ್ದಾರೆ.