ಪುತ್ತೂರು: ಬಂದೂಕು ತೋರಿಸಿ ದರೋಡೆ ಪ್ರಕರಣ- ಆರೋಪಿಗಳು ಅರೆಸ್ಟ್

ಪುತ್ತೂರು: ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಕುದ್ಕಾಡಿ ತೋಟದಮೂಲೆಯ ಕಸ್ತೂರಿ ರೈ ಹಾಗೂ ಅವರ ಪುತ್ರ ಗುರುಪ್ರಸಾದ್ ರೈ ಎಂಬುವರನ್ನು ಮನೆಯೊಳಗೆ ಕಟ್ಟಿಹಾಕಿ, ಬಂದೂಕು ತೋರಿಸಿ 15 ಪವನ್ ಚಿನ್ನ, 50 ಸಾವಿರ ರೂ. ಹಾಗೂ ಸಾಮಗ್ರಿ ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಬಾಡೂರು ನಿವಾಸಿಯೊಬ್ಬನನ್ನು ಅಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಟ್ಲ ಠಾಣಾ ವ್ಯಾಪ್ತಿಯಿಂದಲೂ ಓರ್ವನನ್ನು ವಶಕ್ಕೆ ಪಡೆದಿದ್ದು ಪ್ರಕರಣದಲ್ಲಿ ಐದಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಾಸರಗೋಡು ಜಿಲ್ಲೆಯ ಸೀತಾಂಗೋಳಿ ಸಮೀಪ ಬಾಡೂರಿನ ಕ್ಲಬ್ ಒಂದರಲ್ಲಿ ಆಟವಾಡುತ್ತಿದ್ದ ಆರೋಪಿಯನ್ನು ಮಪ್ತಿಯಲ್ಲಿದ್ದ ಕರ್ನಾಟಕ ಪೊಲೀಸರು ಕ್ಲಬ್ ಕಟ್ಟಡಕ್ಕೆ ಸುತ್ತುವರಿದು ವಶಕ್ಕೆ ತೆಗೆದುಕೊಂಡಿದ್ದಾರೆ. ಗಾಂಜಾ ಮಾರಾಟ ಸೇರಿದಂತೆ ಕೆಲವೊಂದು ಕ್ರಿಮಿನಲ್ ಕೃತ್ಯಗಳಲ್ಲಿ ಶಾಮೀಲಾಗಿರುವ ಆತನ ವಿರುದ್ಧ ಬದಿಯಡ್ಕ ಪೊಲೀಸ್ ಠಾಣೆಯಲ್ಲೂ ಕೇಸು ದಾಖಲಾಗಿದೆ. ಪ್ರಕರಣದ ಆರಂಭದಿಂದಲೂ ಕಾಸರಗೋಡಿನ ವ್ಯಕ್ತಿಯೊಬ್ಬನ ಕೈವಾಡವಿರುವ ಬಗ್ಗೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದರು. ಈ ನಿಟ್ಟಿನಲ್ಲಿ ತನಿಖೆಯನ್ನು ಕಾಸರಗೋಡಿಗೆ ವಿಸ್ತರಿಸಿದ್ದರು. ಪುತ್ತೂರಿನ ತೋಟದಮೂಲೆ ನಿವಾಸಿ ಕಸ್ತೂರಿ ರೈ ಹಾಗೂ ಅವರ ಪುತ್ರ ಗುರು ಪ್ರಸಾದ್ ರೈಯವರನ್ನು ಕಟ್ಟಿ ಹಾಕಿ ಕೃತ್ಯ ನಡೆಸಲಾಗಿತ್ತು. ತಡರಾತ್ರಿ 2 ಗಂಟೆಗೆ ಮನೆಗೆ ನುಗ್ಗಿದ್ದ ದರೋಡೆಕೋರರ ತಂಡ ಸರಿ ಸುಮಾರು ಎರಡೂವರೆ ಗಂಟೆ ಕಾಲ ಮನೆಯನ್ನು ಜಾಲಾಡಿ ಕೃತ್ಯ ನಡೆಸಿತ್ತು. ದರೋಡೆಕೋರರು ಕೈಯಲ್ಲಿ ಮಾರಕಾಯುಧಗಳನ್ನು ಹಿಡಿದುಕೊಂಡಿದ್ದರು. ಹಾಗೂ ಮನೆಯಲ್ಲಿದ್ದ ಮೊಬೈಲ್ ಪೋನ್ ಗಳನ್ನು ನೀರಿನಲ್ಲಿ ಹಾಕಿ ಬೈಕ್‌ನ ಕೀ ಹಾಗೂ ಟಾರ್ಚ್ ಹಿಡಿದುಕೊಂಡು ಪರಾರಿಯಾಗಿದ್ದರು.

Leave a Reply