ಮಂಗಳೂರು : ಸಮಾಜ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ, ಅಶಕ್ತರ ಕಣ್ಣೀರು ಒರೆಸುವ ಗುರು ಬೆಳದಿಂಗಳು ಸಂಸ್ಥೆಯ ವತಿಯಿಂದ ಉಳಾಯಿ ಬೆಟ್ಟುವಿನ ವಿಶೇಷ ಚೇತನ ಮಹಿಳೆ ಸುಜಾತ ಎಂಬವರಿಗೆ ಮನೆ ನಿಮಾಣಕ್ಕೆ 1 ಲಕ್ಷ ರೂಪಾಯಿ ಸಹಾಯಧನವನ್ನು ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ವಿತರಿಸಲಾಯಿತು.
ಈ ವೇಳೆ ಮಾಹಿತಿ ನೀಡಿದ ಸಂಸ್ಥೆಯ ಅಧ್ಯಕ್ಷ ಆರ್. ಪದ್ಮರಾಜ್ ಅವರು ಶಿಕ್ಷಣ, ಆಸರೆ, ಆರೋಗ್ಯ ಎನ್ನುವ ಉದ್ದೇಶವನ್ನು ಇಟ್ಟು ಕೊಂಡು ನಾರಾಯಣ ಗುರುಗಳ ತತ್ವ ಸಂದೇಶ, ಪ್ರೇರಣೆಯಂತೆ ನಾವು ಸಮಾಜದಲ್ಲಿರುವ ಅಶಕ್ತರ ಕಣ್ಣೀರು ಒರೆಸುವ ಕೆಲಸವನ್ನು ಮಾಡುತ್ತಾ ಬಂದಿದ್ದೇವೆ. ಈಗಾಗಲೇ ಹಲವು ಮಂದಿ ಬಡವರಿಗೆ ಮನೆ ನಿರ್ಮಿಸಿ ಕೊಟ್ಟಿದ್ದೇವೆ.
ಅನಾರೋಗ್ಯ ಪೀಡಿತರಿಗೆ ಸಹಾಯ ಹಸ್ತ ಚಾಚಿದ್ದೇವೆ. ಉಳಾಯಿ ಬೆಟ್ಟುವಿನ ವಿಶೇಷ ಚೇತನ ಮಹಿಳೆ ಸುಜಾತ ಅವರು ಇಬ್ಬರು ಪುಟ್ಟ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದು ಮನೆ ಕಟ್ಟಿಸುವ ಬಗ್ಗೆ ನಮ್ಮ ಬಳಿಗೆ ಬಂದು ಸಹಾಯಯಾಚಿಸಿದ್ದರು.
ಮಾನವೀಯತೆಯ ನೆಲೆಯಲ್ಲಿ ಅವರಿಗೆ 1 ಲಕ್ಷ ರೂಪಾಯಿಗಳ ಸಹಾಯ ನೀಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ದೇವೇಂದ್ರ ಪೂಜಾರಿ, ಜಯಾನಂದ ಪೂಜಾರಿ, ವಿಷ್ಣು ದಾಸ್, ರೋಹಿದಾಸ್, ರಾಜೇಂದ್ರ ಚಿಲಿಂಬಿ ಉಪಸ್ಥಿತರಿದ್ದರು.