ದಕ್ಷಿಣಕನ್ನಡ: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿರುವುದನ್ನು ಕಂಡಿಸಿ ಸೆ. 29ರ ಇಂದು ಕನ್ನಡ ಪರ ಸಂಘಟನೆಗಳು ಮತ್ತು ವಿವಿಧ ರಾಜಕೀಯ ಪಕ್ಷಗಳು ಕರ್ನಾಟಕ ಬಂದ್ಗೆ ಕರೆ ನೀಡಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾಹಿತಿ ನೀಡಿದ್ದಾರೆ. ಇನ್ನು ಖಾಸಗಿ ಬಸ್ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ದಿಲ್ ರಾಜ್ ಆಳ್ವ ಹೇಳಿಕೆ ನೀಡಿದ್ದು, ಬಂದ್ ಗೆ ಯಾವುದೇ ರೀತಿಯ ಸಹಕಾರ ನೀಡಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಇಂದು ಕಾವೇರಿ ಕಿಚ್ಚಿಗೆ ದಕ್ಷಿಣ ಕನ್ನಡದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಎಂದಿನಂತೆ ಜನಜೀವನ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಸಾರಿಗೆ ಎಂದಿನಂತೆ ಸೇವೆಯಿದೆ. ಮಂಗಳೂರಿನಿಂದ ಬೆಂಗಳೂರಿಗೆ ಬಸ್ ಗಳು ಹೊರಟಿವೆ. ಎಂದಿನಂತೆ ಎಲ್ಲಾ ಬಸ್ ಗಳನ್ನು ಕೆಎಸ್ಆರ್ಟಿಸಿ ಆಪರೇಟ್ ಮಾಡಿದೆ. ಎತ್ತಿನಹೊಳೆ ಹೋರಾಟಕ್ಕೆ ನಮ್ಮ ಜಿಲ್ಲೆಯವರಿಗೆ ಯಾರು ಬೆಂಬಲ ನೀಡಲಿಲ್ಲ. ತುಳು ಭಾಷೆಯನ್ನ ರಾಜ್ಯದ 2ನೇ ಅಧಿಕೃತ ಭಾಷೆಯನ್ನಾಗಿಸುವ ಹೋರಾಟಕ್ಕೂ ಬೆಂಬಲ ನೀಡಲಿಲ್ಲ. ರಾಜ್ಯದ ಬೇರೆ ಭಾಗದ ಯಾವುದೇ ಶಾಸಕರು ,ಜನರು, ಅಥವಾ ಯಾವುದೇ ಕನ್ನಡ ಪರ ಸಂಘಟನೆಗಳು ನಮ್ಮನ್ನು ಬೆಂಬಲಿಸಿಲ್ಲ. ದಕ್ಷಿಣ ಕನ್ನಡ ಉಡುಪಿ ಪರಿಸರ ಪೂರಕವಾಗಿದ್ದ ಜಿಲ್ಲೆ. ಎತ್ತಿನಹೊಳೆ ಯೋಜನೆ ಮೂಲಕ ಪರಿಸರ ನಾಶ ಮಾಡಿದ್ದಾರೆ. ಯಾವುದೇ ಸರಕಾರ ಬಂದರೂ ಆ ಯೋಜನೆಗೆ ಹಣ ಮೀಸಲಿಟ್ಟು ದಕ್ಷಿಣ ಕನ್ನಡ ಜಿಲ್ಲೆಗೆ ಬರೆ ಎಳೆಯುತ್ತಿದ್ದಾರೆ. ಹಾಗಾಗಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಕರ್ನಾಟಕ ಬಂದ್ ಗೆ ಯಾವುದೇ ಬೆಂಬಲವಿಲ್ಲ. ಹಾಗಿ ಕಾವೇರಿ ವಿಚಾರದ ಬಂದ್ ಗೂ ನಮ್ಮ ಬೆಂಬಲವಿಲ್ಲ ಎಂದು ಹೇಳಿದ್ದಾರೆ.