October 13, 2025
WhatsApp Image 2023-10-02 at 1.10.49 PM

ಕೇರಳ : ಕೇರಳದ ಕೊಚ್ಚಿಯಲ್ಲಿ ಭಾನುವಾರ ಕಾರೊಂದು ಪೆರಿಯಾರ್ ನದಿಗೆ ಉರುಳಿದ ಪರಿಣಾಮ ಇಬ್ಬರು ವೈದ್ಯರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡ ಘಟನೆ ನಡೆದಿದೆ.

ಮೃತರನ್ನು ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಅದ್ವೈತ್ (29) ಮತ್ತು ಅಜ್ಮಲ್ (29) ಎಂದು ಗುರುತಿಸಲಾಗಿದೆ. ಅಪಘಾತ ನಡೆದ ವೇಳೆ ಸ್ಥಳದಲ್ಲಿ ಜೋರಾಗಿ ಮಳೆ ಸುರಿಯುತ್ತಿತ್ತು ಮತ್ತು ಕಾರು ಚಲಾಯಿಸುತ್ತಿದ್ದ ಅದ್ವೈತ್ ಜಿಪಿಎಸ್ ಟ್ರ್ಯಾಕಿಂಗ್ ಅನ್ನು ಆನ್ ಮಾಡಿದ್ದರು. ಗೂಗಲ್ ನಕ್ಷೆ ನೀಡಿದ್ದ ಮಾಹಿತಿಯಂತೆ ಕಾರನ್ನು ಚಲಾಯಿಸಿದ ಹಿನ್ನಲೆ ಸೀದಾ ನದಿಗೆ ಬಿದ್ದಿದ್ದಾರೆ. ಆ ಸಮಯದಲ್ಲಿ ಭಾರೀ ಮಳೆಯಿಂದಾಗಿ ಗೋಚರತೆ ತುಂಬಾ ಕಡಿಮೆಯಾಗಿತ್ತು, ಅವರು ಗೂಗಲ್ ನಕ್ಷೆ ತೋರಿಸಿದ ಮಾರ್ಗವನ್ನು ಅನುಸರಿಸುತ್ತಿದ್ದರು. ಆದರೆ ನಕ್ಷೆಗಳು ಸೂಚಿಸಿದಂತೆ ಎಡ ತಿರುವು ತೆಗೆದುಕೊಳ್ಳುವ ಬದಲು, ಅವರು ತಪ್ಪಾಗಿ ಮುಂದೆ ಹೋಗಿ ನದಿಗೆ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತವನ್ನು ಕಂಡ ಸ್ಥಳೀಯರು ತಕ್ಷಣ ಸ್ಥಳದಲ್ಲಿ ಜಮಾಯಿಸಿದರು. ಅಲ್ಲಿದ್ದ ವ್ಯಕ್ತಿಯೊಬ್ಬರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಶನಿವಾರ ಡಾ.ಅದ್ವೈತ್ ಅವರ ಜನ್ಮದಿನವಾಗಿತ್ತು. ಕಾರಿನಲ್ಲಿ ಅದ್ವೈತ್ ಜೊತೆಗೆ ನಾಲ್ವರು ಇದ್ದರು. ಐವರೂ ಕೊಚ್ಚಿಯಿಂದ ಕೊಡಂಗಲ್ಲೂರಿಗೆ ಹಿಂತಿರುಗುತ್ತಿದ್ದರು. ಅದ್ವೈತ್ ಹುಟ್ಟುಹಬ್ಬದ ನಿಮಿತ್ತ ಈ ಮಂದಿ ಶಾಪಿಂಗ್‌ಗೆ ತೆರಳಿದ್ದರು ಎಂದು ಹೇಳಲಾಗುತ್ತಿದೆ. ಇದೇ ವೇಳೆ ಅಪಘಾತದಿಂದ ಬದುಕುಳಿದಿರುವ ಡಾ.ಗಾಜಿಕ್ ತಬ್ಸಿರ್, ಜಿಪಿಎಸ್ ನೆರವಿನಿಂದ ಮುಂದೆ ಹೋಗುತ್ತಿದ್ದೆವು ಎಂದು ತಿಳಿಸಿದರು. ನಾನು ಕಾರನ್ನು ಓಡಿಸುತ್ತಿರಲಿಲ್ಲ. ಗೂಗಲ್ ಮ್ಯಾಪ್ ನೀಡಿದ ತಪ್ಪು ನಿರ್ದೇಶನದಿಂದ ಅಥವಾ ವಾಹನದ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆಯೇ ಎಂಬ ಬಗ್ಗೆ ನಾವು ಯಾವುದೇ ನಿಖರವಾದ ಉತ್ತರವನ್ನು ನೀಡಲು ಸಾಧ್ಯವಿಲ್ಲ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

ಪೊಲೀಸರು ಅಪಘಾತದ ತನಿಖೆಯಲ್ಲಿ ನಿರತರಾಗಿದ್ದಾರೆ. ಇಬ್ಬರ ಮೃತದೇಹಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಯಲಿದೆ.

About The Author

Leave a Reply