Visitors have accessed this post 500 times.

ಹೋಮ್ ನರ್ಸ್ ನಿಂದ ಬಾಲಕಿಗೆ ಲೈಂಗಿಕ ದೌರ್ಜನ್ಯ- 20 ವರ್ಷ ಕಾರಾಗೃಹ ಶಿಕ್ಷೆ

Visitors have accessed this post 500 times.

ಮಂಗಳೂರು: ಆರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಹೋಮ್ ನರ್ಸ್‌ಗೆ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಮತ್ತು ಎಫ್‌ಟಿ ಎಸ್‌ಸಿ-2 ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ. ಹಾವೇರಿ ಜಿಲ್ಲೆಯ ನೆಲೋಗಲ್ ಗ್ರಾಮ ಮೂಲದ ಬೆನಕರಾಜ್ ಲಮಾಣಿ (25) ಶಿಕ್ಷೆಗೊಳಗಾದ ಆರೋಪಿ. ಸುರತ್ಕಲ್ ಪರಿಸರವಾಸಿ ಸಂತ್ರಸ್ತ ಬಾಲಕಿಯ ಅಸೌಖ್ಯದಿಂದಿದ್ದ ಅಜ್ಜನನ್ನು ನೋಡಿಕೊಳ್ಳಲು ಹೋಮ್ ನರ್ಸ್ ಆಗಿದ್ದ ಆರೋಪಿಯನ್ನು ನೇಮಿಸಲಾಗಿತ್ತು. 2022ರ ಜನವರಿಯಲ್ಲಿ ಒಂದು ದಿನ ಬಾಲಕಿಯ ತಾಯಿ ಔಷಧ ತರಲೆಂದು ಮನೆಯಿಂದ ಹೊರಗೆ ಹೋಗಿದ್ದರು. ಈ ವೇಳೆ ಆರೋಪಿ ಬಾಲಕಿ ಮೇಲೆ ದೌರ್ಜನ್ಯ ಎಸಗಿದ್ದ. ಈ ಬಗ್ಗೆ ಮಂಗಳೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್‌ಸ್ಪೆಕ್ಟರ್ ಎಸ್.ಎಚ್.ಭಜಂತ್ರಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಮಂಜುಳಾ ಇಟ್ಟಿ ಶುಕ್ರವಾರ ತೀರ್ಪು ನೀಡಿದ್ದಾರೆ. ಆರೋಪಿ ಮೇಲಿನ ಅಪರಾಧ ಸಾಬೀತಾಗಿರುವ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 376 ಮತ್ತು ಪೊಕ್ಸೊ ಪ್ರಕರಣದಡಿ 20 ವರ್ಷ ಕಠಿಣ ಶಿಕ್ಷೆ ಮತ್ತು 25,000 ರೂ. ದಂಡ ವಿಧಿಸಲಾಗಿದೆ. ಐಪಿಸಿ ಸೆಕ್ಷನ್ 323ರಡಿ 6 ತಿಂಗಳ ಸಾದಾ ಸಜೆ ಹಾಗೂ 1000 ರೂ. ದಂಡ ವಿಧಿಸಿದ್ದಾರೆ. ಅಲ್ಲದೆ ನೊಂದ ಬಾಲಕಿಗೆ 2 ಲಕ್ಷ ರೂ. ಪರಿಹಾರ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶಿಸಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೆಂಕಟರಮಣ ಸ್ವಾಮಿ ಸಿ‌. ವಾದಿಸಿದರು.

Leave a Reply

Your email address will not be published. Required fields are marked *