ಮಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ ರಸ್ತೆ ಬದಿಯ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಕಾರು ಹರಿದು ಯುವತಿಯೊಬ್ಬರು ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳೂರು ಲೇಡಿಹಿಲ್ ನಲ್ಲಿ ನಡೆದಿದೆ. ಕುದ್ರೋಳಿ ದೇವಸ್ಥಾನಕ್ಕೆ ಬಂದು ಹೋಗುತ್ತಿದ್ದವರ ಕಾರು ಎರಗಿದ್ದು ಸ್ಥಳದಲ್ಲಿಯೇ ಓರ್ವ ಯುವತಿ ಮೃತಪಟ್ಟಿದ್ದಾಳೆ.
ಸಂಜೆ 4 ಗಂಟೆ ವೇಳೆಗೆ ಘಟನೆ ನಡೆದಿದ್ದು, ಐವರು ಯುವತಿಯರು ಮಣ್ಣಗುಡ್ಡ ಮಹಾನಗರ ಪಾಲಿಕೆ ಸ್ವಿಮಿಂಗ್ ಪೂಲ್ ಬಳಿ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮಣ್ಣಗುಡ್ಡದ ಕಮ್ಲೇಶ್ ಬಲ್ ದೇವ್ ಎಂಬಾತ ಮಣ್ಣಗುಡ್ಡ ಜಂಕ್ಷನ್ ನಿಂದ ಲೇಡಿಹಿಲ್ ಕಡೆಗೆ ಹುಂಡೈ ಇಯೋನ್ ಕಾರನ್ನು ಅತಿವೇಗ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯುವತಿಯರ ಗುಂಪಿಗೆ ಡಿಕ್ಕಿಯಾಗಿ ಸ್ಥಳದಿಂದ ಅದೇ ವೇಗದಲ್ಲಿ ಪರಾರಿಯಾಗಿದ್ದಾನೆ. ನಂತರ ಆತ ಕಾರನ್ನು ಹೊಂಡ ಶೋರೂಂ ಎದುರು ಪಾರ್ಕ್ ಮಾಡಿ ಮನೆಗೆ ತೆರಳಿದ್ದಾನೆ. ಬಳಿಕ ಟ್ರಾಫಿಕ್ ಠಾಣೆಗೆ ತಂದೆ ಬಲದೇವ್ ಅವರೊಂದಿಗೆ ಬಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟ ಯುವತಿ ಸುರತ್ಕಲ್ ಕಾನ ನಿವಾಸಿ ರೂಪಶ್ರೀ (23) ಎಂದು ತಿಳಿದುಬಂದಿದೆ. ಗಾಯಗೊಂಡವರನ್ನು ಸ್ವಾತಿ( 26) ಹಿತನ್ವಿ(16) ಕೃತಿಕಾ( 16) ಯತಿಕಾ (12) ಎಂದು ಗುರುತಿಸಲಾಗಿದೆ. ಭಯಾನಕ ದೃಶ್ಯ: ಈ ಘಟನೆಯ ನಡೆದ ವೇಳೆ ಸೆಕ್ಯೂರಿಟಿ ಗಾರ್ಡ್ ಒಬ್ಬರು ಕಟ್ಟಡದ ಮುಂಭಾಗದಲ್ಲಿ ನಿಂತಿದ್ದು, ಇದೇ ಸಮಯದಲ್ಲಿ ಮೂರ್ನಾಲ್ಕು ಯುವತಿಯರಿದ್ದ ಗುಂಪೊಂದು ಈ ಕಟ್ಟಡಕ್ಕೆ ಹೊಂದಿಕೊಂಡಿರುವ ಪಾದಚಾರಿ ಮಾರ್ಗದಲ್ಲಿ ತಮ್ಮಷ್ಟಕ್ಕೆ ನಡೆದುಕೊಂಡು ಬರುತ್ತಿದ್ದರು. ಶರವೇಗದಲ್ಲಿ ಬಂದ ಕಾರು ಯವತಿಯರ ಗುಂಪಿನ ಮೇಲೆ ಹರಿದಿದ್ದು, ಯುವತಿಯರನ್ನು ತಳ್ಳಿಕೊಂಡು ಮುಂದೆ ಸಾಗಿದೆ. ಮುಂದುವರಿದು ಕಂಬವೊಂದಕ್ಕೆ ಬಡಿದು ಪುನಃ ರಸ್ತೆಯಲ್ಲಿ ಸಾಗುತ್ತಿರುವುದು ದೃಶ್ಯದಲ್ಲಿದೆ.