Visitors have accessed this post 757 times.
ಮಂಗಳೂರು: ಭೂಗತ ಪಾತಕಿ ರವಿ ಪೂಜಾರಿ ಮತ್ತು ಕಲಿ ಯೋಗೇಶನ ಸಹಚರ, ಜಿಲ್ಲೆಯ ಹಲವು ಠಾಣೆಗಳಲ್ಲಿ ಅರೆಸ್ಟ್ ವಾರಂಟ್ ಎದುರಿಸುತ್ತಿದ್ದ ನಟೋರಿಯಸ್ ಶಾರ್ಪ್ ಶೂಟರ್ ಕೇರಳದ ಮಂಜೇಶ್ವರ, ಪೈವಳಿಕೆ ನಿವಾಸಿ ಮೊಹಮ್ಮದ್ ಹನೀಫ್ ಯಾನೆ ಅಲಿ ಮುನ್ನಾನನ್ನು ಮಂಗಳೂರು ದಕ್ಷಿಣ ಉಪವಿಭಾಗ ಎಸಿಪಿ ಧನ್ಯಾ ನಾಯಕ್ ನೇತೃತ್ವದ ತಂಡ ಕೇರಳದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ನಟೋರಿಯಸ್ ಶಾರ್ಪ್ ಶೂಟರ್ ಭೂಗತ ಪಾತಕಿ ರವಿ ಪೂಜಾರಿಯ ಕುಕೃತ್ಯಗಳಿಗೆ ಕರಾವಳಿಯ ಪ್ರತಿನಿಧಿಯಾಗಿದ್ದ ಶೂಟರ್ ಹನೀಫ್ ಯಾನೆ ಅಲಿ ಮುನ್ನಾ ಹಲವು ಶೂಟೌಟ್, ದರೋಡೆ, ಬೆದರಿಕೆ ಪ್ರಕರಣದಲ್ಲಿ ರಾಜ್ಯದ ಅನೇಕ ಠಾಣೆಗಳಿಂದ ಅರೆಸ್ಟ್ ವಾರಂಟ್ ಎದುರಿಸುತ್ತಿದ್ದನು. ಈತನ ವಿರುದ್ಧ ಕೊಣಾಜೆ, ಮಂಗಳೂರು ಉತ್ತರ, ಪುತ್ತೂರು, ಬರ್ಕೆ, ವಿಟ್ಲ ಉಳ್ಳಾಲ, ಬೆಂಗಳೂರು ವಿಮಾನ ನಿಲ್ದಾಣ ಠಾಣೆಯಲ್ಲಿ ಹಲವಾರು ಪ್ರಕರಣ ದಾಖಲಾಗಿದೆ.
2010 ಮತ್ತು 2013ರಲ್ಲಿ ಕಾಸರಗೋಡು ಜಿಲ್ಲೆಯ ಬೇವಿಂಜ ಪಿಡಬ್ಲ್ಯುಡಿ ಗುತ್ತಿಗೆದಾರರ ಶೂಟೌಟ್ ಪ್ರಕರಣ, ಮಂಜೇಶ್ವರದಲ್ಲಿ ಕಳ್ಳತನ, ಕುಂಬಳೆ ಹಾಗೂ ವಿದ್ಯಾನಗರ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು. ಮಂಗಳೂರು ಉತ್ತರ ಠಾಣಾ ವ್ಯಾಪ್ತಿಯ ಸಂಜೀವ ಶೆಟ್ಟಿ ಸಿಲ್ಕ್ ಮಳಿಗೆ ಮತ್ತು ಪುತ್ತೂರು ರಾಜಧಾನಿ ಜ್ಯುವೆಲ್ಲರ್ಸ್ ನಲ್ಲಿ ಈತ ನಡೆಸಿದ ಶೂಟೌಟ್ ಪ್ರಕರಣ ಜಿಲ್ಲೆಯಲ್ಲಿ ಭಯಾನಕ ಸದ್ದು ಮಾಡಿತ್ತು.
ಕರ್ನಾಟಕದಲ್ಲಿ ರವಿ ಪೂಜಾರಿಯ ಅಂಡರ್ ವರ್ಲ್ಡ್ ಮಾಫಿಯಾವನ್ನು ಅಲಿ ಮುನ್ನಾ ಮತ್ತು ಮನೀಷ್ ಕಂಟ್ರೋಲ್ ಮಾಡುತ್ತಿದ್ದರು. ಕರಾವಳಿಯ ಭೂಗತ ವ್ಯವಹಾರವನ್ನು ಅಲಿ ಮುನ್ನಾನೇ ನಿರ್ವಹಿಸುತ್ತಿದ್ದ. ಕಾರ್ಕಳದ ಕಿಶನ್ ಹೆಗ್ಡೆ ಕೊಲೆಗೆ ಪ್ರತೀಕಾರವಾಗಿ ಕೋಡಿಕೆರೆ ಮನೋಜ್ ಗ್ಯಾಂಗಿನಿಂದ ಬೆಂಗಳೂರಲ್ಲಿ ಮನೀಷ್ ಕೊಲೆಯಾಗಿದ್ದ. ಆಪ್ತ ಸಹಚರ ಮನೀಷ್ ಕೊಲೆಯಾದ ನಂತರ ಅಲಿ ಮುನ್ನಾ ಕಂಗಾಲಾಗಿ ಮುಂಬೈ, ಬೆಂಗಳೂರು ಕಡೆ ತಲೆಮರೆಸಿಕೊಂಡಿದ್ದನು.
ಈ ಘಟನೆ ಬಳಿಕವು ಹಫ್ತಾ ವಸೂಲಿಯಲ್ಲಿ ತೊಡಗಿದ್ದ ಅಲಿ ಮುನ್ನಾನನ್ನು ಎಸಿಪಿ ಧನ್ಯ ನಾಯಕ್ ನೇತೃತ್ವದ ತಂಡ ಹಾಗೂ ಕೊಣಾಜೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಕೇರಳದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.