ಮಂಗಳೂರು: ಕೇರಳದ ಎರ್ನಾಕುಲಂ ಜೆಹೋವಾ ವಿಟ್ನೆಸ್ ಕ್ರೈಸ್ತ ಸಮಾವೇಶದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಹಿನ್ನೆಲೆಯಲ್ಲಿ ಕೇರಳ ರಾಜ್ಯದ ಗಡಿ ಹಂಚಿಕೊಂಡಿರುವ ಪ್ರದೇಶದಲ್ಲಿ ಹಾಗೂ ಮಂಗಳೂರಿನಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು ತಪಾಸಣೆ ತೀವ್ರಗೊಳಿಸಿದ್ದಾರೆ.
ಕೇರಳದಿಂದ ಕರ್ನಾಟಕ ಪ್ರವೇಶಿಸುವ ಗಡಿಭಾಗಗಳಾದ ತಲಪಾಡಿ, ದೇವಿಪುರ, ಕೊಣಾಜೆ, ನೆಕ್ಕಿಲಪದವು, ನಂದಪುರ, ಮುದಾಂಗರ, ನಾರ್ಯ ಸೇರಿದಂತೆ ಹಲವು ಕಡೆ ಪೊಲೀಸರು ನಾಕಾಬಂಧಿ ಹಾಕಿ ತಪಾಸಣೆ ನಡೆಸುತ್ತಿದ್ದಾರೆ.
ರಾಜ್ಯ ಪ್ರವೇಶಿಸುವ ಪ್ರತಿಯೊಂದು ವಾಹನ, ವ್ಯಕ್ತಿಗಳ ಮಾಹಿತಿ, ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.ಮಂಗಳೂರು ನಗರ ವ್ಯಾಪ್ತಿಯ ಚರ್ಚ್ , ಮಸೀದಿ ಸೇರಿ ಹಲವು ಪ್ರಾರ್ಥನಾ ಮಂದಿರಗಳ ಭದ್ರತೆ ಹೆಚ್ಚಿಸಲಾಗಿದೆ.
ಬಸ್ ತಂಗುದಾಣ, ಮಾಲ್ , ಬೀಚ್ , ಸೇರಿದಂತೆ ಜನಸಂದಣಿ ಇರುವ ಪ್ರದೇಶದಲ್ಲಿಯೂ ಭದ್ರತೆ ಹೆಚ್ಚಿಸಲಾಗಿದ್ದು ತಪಾಸಣೆ ನಡೆಸಲಾಗುತ್ತಿದೆ. ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ , ಹೊಟೇಲ್ ಸೇರಿದಂತೆ ಹಲವೆಡೆ ವಿಶೇಷ ಜಾಗ್ರತೆ ವಹಿಸಲಾಗಿದ್ದು ತಪಾಸಣೆ ಬಿಗಿಗೊಳಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅರ್ಗವಾಲ್ ತಿಳಿಸಿದ್ದಾರೆ.