Visitors have accessed this post 1419 times.
ಕಟೀಲು: ಹೆತ್ತ ತಾಯಿಯನ್ನೇ ಅತ್ಯಾಚಾರಗೈದು ಕೊಂದ ವಿಕೃತಕಾಮಿ ಆರೋಪಿ ಮಗನನ್ನು ಬಜಪೆ ಪೊಲೀಸರು ಸೋಮವಾರ ಬಂಧಿಸಿದ್ದು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕಟೀಲು ಸಮೀಪದ ಕೊಂಡೆಮೂಲ ನಿವಾಸಿ ರತ್ನ (56) ಎಂಬುವರನ್ನು ಅವರ ಸ್ವಂತ ಮಗ ರವಿರಾಜ್ ಶೆಟ್ಟಿ (33) ಎಂಬಾತ ಅಕ್ಟೋಬರ್ 26 ಗುರುವಾರ ರಾತ್ರಿ ಕೊಲೆಗೈದು ಮನೆಗೆ ಬೀಗ ಹಾಕಿ ಕಿನ್ನಿಗೋಳಿಯ ವಸತಿಗೃಹದಲ್ಲಿ ಉಳಿದುಕೊಂಡಿದ್ದ. ಈತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಾಯಿಯನ್ನು ಕೊಂದಿರುವುದು ತಾನೇ ಎಂದು ಒಪ್ಪಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ರತ್ನ ಅವರ ಪತಿ ದಯಾನಂದ ಶೆಟ್ಟಿ ಅವರು 7 ವರ್ಷದ ಹಿಂದೆ ಮೃತಪಟ್ಟಿದ್ದು ಬಳಿಕ ತಾಯಿ, ಮಗ ಇಬ್ಬರೇ ಕೊಂಡೆ ಮೂಲದ ಮನೆಯಲ್ಲಿ ವಾಸವಾಗಿದ್ದರು. ಆರೋಪಿಯು ಗಾಂಜಾ ವ್ಯಸನಿಯಾಗಿದ್ದ ಎನ್ನಲಾಗಿದ್ದು, ಗಾಂಜಾ ಅಮಲಿನಲ್ಲಿ ತಾಯಿಯ ಮೇಲೆ ಅತ್ಯಾಚಾರ ಎಸಗಿರಬಹುದೆಂದು ಶಂಕಿಸಲಾಗಿದೆ. ಮುಖಕ್ಕೆ ಬಟ್ಟೆ ಕಟ್ಟಿ, ಕೈಕಾಲುಗಳಿಗೆ ನೈಲಾನ್ ಹಗ್ಗದಿಂದ ಬಿಗಿದು ಕಟ್ಟಿ ಅತ್ಯಾಚಾರ ಎಸಗಿ ಕೊಲೆಗೈದಿರುವುದು ವಿಚಾರಣೆಯ ವೇಳೆ ದೃಢಪಟ್ಟಿದೆ. ಆರೋಪಿ ರವಿರಾಜ್ ಶೆಟ್ಟಿಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದ್ದು ವರದಿಗಾಗಿ ಕಾಯಲಾಗುತ್ತಿದೆ. ಡ್ರಗ್ಸ್, ಗಾಂಜಾ ಸೇವನೆ ಹಾಗೂ ಅತ್ಯಾಚಾರ ಎಸಗಿರುವ ಬಗ್ಗೆ ವೈದ್ಯಕೀಯ ವರದಿ ಬಳಿಕವೇ ದೃಢಪಡಿಸಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇನ್ಸ್‌ಪೆಕ್ಟರ್ ಸಂದೀಪ್ ಮತ್ತು ಅವರ ತಂಡ ಆರೋಪಿ ರವಿರಾಜ್ ಶೆಟ್ಟಿಯನ್ನು ಬಂಧಿಸಿ ಪ್ರಕರಣದ ತನಿಖೆಯನ್ನು ಮುಂದುವರಿಸಿದೆ.