
ಬೆಂಗಳೂರು: ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಕೋಟ್ಯಾಂತರ ರೂಪಾಯಿ ವಂಚಿಸಿದ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ಪೂರ್ಣಗೊಳಿಸಿದ್ದು, ಚೈತ್ರಾ & ಗ್ಯಾಂಗ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಮುಂದಾಗಿದ್ದಾರೆ. ವಂಚನೆ ಕುರಿತು 68 ಸಾಕ್ಷ್ಯಗಳನ್ನು ಕಲೆ ಹಾಕಿರುವ ಸಿಸಿಬಿ ಪೊಲೀಸರು ಆರೋಪಿಗಳ ವಿರುದ್ಧ ಮುಂದಿನ ವಾರ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಿದೆ ಎಂದು ತಿಳಿದು ಬಂದಿದೆ. ವಂಚನೆ ಪ್ರಕರಣದಲ್ಲಿ ಈಗಾಗಲೇ ಸಿಸಿಬಿ ಪೊಲೀಸರು ಬರೋಬ್ಬರಿ 4 ಕೋಟಿ 11 ಲಕ್ಷ ರೂಪಾಯಿಯನ್ನು ಜಪ್ತಿ ಮಾಡಿದ್ದಾರೆ. ವಂಚನೆಗೆ ಸಂಬಂಧಿಸಿದ ಪ್ರಾಥಮಿಕ ಸಾಕ್ಷ್ಯ, ಡಿಜಿಟಲ್ ಸಾಕ್ಷ್ಯ, ಸಾಂದರ್ಭಿಕ ಸಾಕ್ಷ್ಯಗಳನ್ನು ಕಲೆಹಾಕಲಾಗಿದ್ದು, ಪ್ರಮುಖ ಆರೋಪಿಗಳಾದ ಚೈತ್ರಾ, ಶ್ರೀಕಾಂತ್, ಗಗನ್ ಕಡೂರು, ಹಾಲಶ್ರೀ, ಧನರಾಜ್ ಸೇರಿದಂತೆ 7 ಆರೋಪಿಗಳ ವಿರುದ್ಧ ಸಿಸಿಬಿ, ಚಾರ್ಚ್‌ಶೀಟ್ ಸಲ್ಲಿಸಲಿರುವುದಾಗಿ ಸಿಸಿಬಿ ಮೂಲಗಳು ತಿಳಿಸಿವೆ. ದೂರುದಾರ ಗೋವಿಂದ ಬಾಬು ಪೂಜಾರಿಯಿಂದ ಪಡೆಯಲಾದ ಆಡಿಯೋ, ವಿಡಿಯೋಗಳ ಬಗ್ಗೆ ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಲಾಗಿದ್ದು, ಆರೋಪಿಗಳ ಮೊಬೈಲ್ ಫೋನ್‌ಗಳಿಂದ ರಿಟ್ರೀವ್ ಮಾಡಲಾದ ಡಾಟಾ ವರದಿ ಕೂಡ ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಿಗೆ ಜಾಮೀನು ದೊರೆತಿಲ್ಲ.


