ನ.11,12ರಂದು ಮುಡಿಪು ಭಾರತೀ ಶಾಲೆ ಅಮೃತ ಮಹೋತ್ಸವ ಸಂಭ್ರಮ

ಉಳ್ಳಾಲ: ಕುರ್ನಾಡು ಗ್ರಾಮದ ಮುಡಿಪು ಶ್ರೀ ಭಾರತೀ ಶಾಲೆ ಸ್ಥಾಪನೆಯಾಗಿ 75 ವರ್ಷಗಳು ಪೂರ್ಣಗೊಂಡಿದ್ದು, ನ.11 ಹಾಗೂ ನ.12ರಂದು ಅದ್ಧೂರಿಯ ಅಮೃತ ಮಹೋತ್ಸವ ಸಮಾರಂಭ ಅಮೃತ ಭಾರತಿ ಸಂಭ್ರಮ ಹೆಸರಿನಲ್ಲಿ ನಡೆಯಲಿದೆ. ಅಮೃತ ಮಹೋತ್ಸವ ಸಮಿತಿ ನೇತೃತ್ವದಲ್ಲಿ ಕಳೆದ ಒಂದು ವರ್ಷದಿಂದ ವಿವಿಧ ಸರಣಿ ಕಾರ್ಯಕ್ರಮಗಳು ನಡೆದಿದ್ದು, ಇದು ಪ್ರಧಾನ ಸಮಾರಂಭವಾಗಿ ಮೂಡಿಬರಲಿದೆ ಎಂದು ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಕೆ.ಆರ್. ತಿಳಿಸಿದ್ದಾರೆ. ನ.11ರಂದು ಅಮೃತ ಭಾರತೀ ವೈಭವ ಹೆಸರಿನಲ್ಲಿ ಅದ್ಧೂರಿಯ ಸಾಂಸ್ಕೃತಿಕ ಮೆರವಣಿಗೆ ಮುಡಿಪು ಕಾಯರ್ ಗೋಳಿ ಶ್ರೀದೇವಿ ಕಂಪೌಂಡ್ ನಿಂದ ಶಾಲಾವರಣ ತನಕ ನಡೆಯಲಿದೆ. ಶ್ರೀ ಮುಡಿಪಿನ್ನಾರ್ ಕ್ಷೇತ್ರ ಆಡಳಿತ ಮೊಕ್ತೇಸರ ಕೆ.ಮುರಳಿ ಮೋಹನ್ ಭಟ್ ಅಧ್ಯಕ್ಷತೆ ವಹಿಸುವರು. ಪ್ರಗತಿಪರ ಕೃಷಿಕ ಚಂದ್ರಶೇಖರ ಗಟ್ಟಿ ಉದ್ಘಾಟಿಸುವರು. ಕಲ್ಲಡ್ಕದ ಬೊಂಬೆ, ಚೆಂಡೆ, ಭಜನಾ ತಂಡಗಳು, ದಫ್, ಬಣ್ಣದ ಕೊಡೆಗಳು, ಶಾಲಾ ಬ್ಯಾಂಡ್, ಸೇವಾ ತಂಡಗಳು, ಹಳೆ ವಿದ್ಯಾರ್ಥಿಗಳು, ಪೋಷಕರು, ಮಕ್ಕಳ ಸಹಿತ ವರ್ಣರಂಜಿತವಾಗಿ ಮೆರವಣಿಗೆ ಮೂಡಿಬರಲಿವೆ.

ಸಂಜೆ 7ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಪ್ರವೇಶ ದ್ವಾರ ಹಾಗೂ ಬಾಲ ವಿಹಾರಗಳನ್ನು ಎಂಆರ್ ಪಿಎಲ್ -ಒಎನ್ ಜಿಸಿ ಸಿಜಿಎಂ ಕೃಷ್ಣ ಹೆಗ್ಡೆ ಉದ್ಘಾಟಿಸುವರು. ಮಂಗಳೂರು ಕಂಬಳ ಸಮಿತಿ ಉಪಾಧ್ಯಕ್ಷ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ದೀಪ ಪ್ರಜ್ವಲನೆ ನೆರವೇರಿಸುವರು. ಉದ್ಯಮಿ ರಾಧಾಕೃಷ್ಣ ರೈ ಅಧ್ಯಕ್ಷತೆ ವಹಿಸುವರು. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಜಯಪ್ರಕಾಶ್ ಕಣಂತೂರು ಬಳಗದ ಸ್ಯಾಕ್ಸೋಫೋನ್ ವಾದನ, ಹಳೆ ವಿದ್ಯಾರ್ಥಿಗಳಿಂದ ಮಧುರಗೀತೆಗಳು, ಗಣೇಶ ಆಚಾರ್ಯ ಅವರಿಂದ ಮಿಮಿಕ್ರಿ, ವಿದುಷಿ ಉಮಾ ವಿಷ್ಣು ಹೆಬ್ಬಾರ್ ಶಿಷ್ಯರಿಂದ ನೃತ್ಯಾಂಕುರ, ಶೈನ್ ಮ್ಯೂಸಿಕ್ ಹರ್ಷಿ ಬಳಗದಿಂದ ಸಂಗೀತ ಸಂಜೆ ಪ್ರಸ್ತುತಗೊಳ್ಳಲಿದೆ.

 

ನ.12ರಂದು ದಿನಪೂರ್ತಿ ಸಮಾರಂಭ ನಡೆಯಲಿದ್ದು, ಬೆಳಗ್ಗೆ 9.15ಕ್ಕೆ ಪುರಾತನ ವಸ್ತು ಸಂಗ್ರಹ ಕೊಠಡಿಯನ್ನು ಶ್ರೀ ಕ್ಷೇತ್ರ ಕಣಂತೂರಿನ ಮೊಕ್ತೇಸರ ನಾರ್ಯಗುತ್ತು ತಿಮ್ಮಪ್ಪ ಕೊಂಡೆ ಯಾನೆ ಮಂಜು ಭಂಡಾರಿ, ವಿವಿಧ ಗೋಷ್ಠಿಗಳನ್ನು ವಿಶ್ರಾಂತ ಪ್ರಾಧ್ಯಾಪಕ ಡಾ.ಜಿ.ವಿ.ಜೋಷಿ, ವೈದ್ಯಕೀಯ ಶಿಬಿರಗಳನ್ನು ನಿಟ್ಟೆ ಪರಿಗಣಿತ ವಿ.ವಿ. ನಿಕಟಪೂರ್ವ ಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ ಬಿ., ರಕ್ತದಾನ ಶಿಬಿರವನ್ನು ಬ್ಲಡ್ ಡೋನರ್ಸ್ ಅಸೋಸಿಯೇಶನ್ ಅಧ್ಯಕ್ಷ ನವಾಜ್ ನರಿಂಗಾನ, ನೆನಪಿನ ನೆರಳು ತರಗತಿ ಕೊಠಡಿಯನ್ನು ಮುಡಿಪು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಅಧ್ಯಕ್ಷ ರಮೇಶ್ ಶೇನವ, ಗ್ರಂಥಾಲಯವನ್ನು ಹಿರಿಯ ಸಾಹಿತಿ ಇರಾ ನೇಮು ಪೂಜಾರಿ ಉದ್ಘಾಟಿಸುವರು. ಕುರ್ನಾಡು ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಗಣೇಶ್ ನಾಯಕ್ ಕುರ್ನಾಡುಗುತ್ತು ದೀಪ ಪ್ರಜ್ವಲನೆ ಮಾಡುವರು. ಅಮೃತ ಮಹೋತ್ಸವ ಸಮಿತಿ ಉಪಾಧ್ಯಕ್ಷ ಡಾ.ಅರುಣ್ ಪ್ರಸಾದ್ ಅಧ್ಯಕ್ಷತೆ ವಹಿಸುವರು. ಬಳಿಕ, ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನೆರವೇರಲಿದೆ. ಈ ಸಂದರ್ಭ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಶಿಕ್ಷಕರಾದ ಎಂ.ಕೆ.ಲೀಲಾ, ಎ.ಸುಧಾ, ಎಂ.ರಾಮ ರಾವ್, ಶಶಿಕಲಾ ಜಿ. ಅವರಿಗೆ ಗುರು ನಮನ ನಡೆಯಲಿದೆ. ನೇತ್ರ ತಪಾಸಣಾ ಶಿಬಿರ, ನೇತ್ರದಾನ ನೋಂದಣಿ, ವೈದ್ಯಕೀಯ ತಪಾಸಣಾ ಶಿಬಿರ, ಅಂಗಾಂಗ ದಾನ ಮತ್ತು ದೇಹದಾನ ಮಾಹಿತಿ, ರಕ್ತದಾನ ಶಿಬಿರಗಳು ನಡೆಯಲಿವೆ.

 

ಬಳಿಕ ಭಾರತೀ ಶಿಕ್ಷಣಾಮೃತ, ಭಾರತೀ ಮಹಿಳಾಮೃತ, ಭಾರತೀ ಕಥಾಮೃತ, ಭಾರತೀ ಕವನಾಮೃತ, ಭಾರತೀ ಚುಟುಕು, ಭಾರತೀ ಶಾಲಾಮೃತ, ‘ಅಮೃತಭಾರತಿ-ನಿನ್ನೆ-ಇಂದು-ನಾಳೆ’ ಹೆಸರಿನ ವಿವಿಧ ಗೋಷ್ಠಿಗಳು ಹಳೆ ವಿದ್ಯಾರ್ಥಿಗಳಿಂದ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಆಕಾಶವಾಣಿ ಕಲಾವಿದೆ ಮಂಜುಳಾ ಜಿ.ರಾವ್ ಇರಾ ಅವರ ವಿದ್ಯಾರ್ಥಿಗಳಿಂದ ಅಮೃತ ವರ್ಷಿಣಿ ಸಂಗೀತ ಕಾರ್ಯಕ್ರಮ, ಚಂದ್ರಶೇಖರ ಕಣಂತೂರು ಅವರಿಂದ ಸ್ಯಾಕ್ಸೋಫೋನ್ ವಾದನ, ಶಾಲಾ ಮಕ್ಕಳಿಂದ ಅಮೃತ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ.

 

ನ.12ರಂದು ಸಂಜೆ 6ಕ್ಕೆ ಅಮೃತ ಭಾರತೀ ಅಮೃತ ಮಹೋತ್ಸವ ಕಟ್ಟಡ ಉದ್ಘಾಟನೆ ನಡೆಯವುದು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಮುಡಿಪು ಸಂತ ಜೋಸೆಫ್ ವಾಜ್ ಚರ್ಚ್ ನ ಫಾ.ಆಸ್ಸಿಸ್ಸಿ ರೆಬೆಲ್ಲೋ, ಅದೂರ್ ತಂಙಳ್ ಸಯ್ಯದ್ ಡಾ.ಅಸ್ಸಯ್ಯದ್ ಮೊಹಮ್ಮದ್ ಅಶ್ರಫ್ ಅಸ್ಸಖಾಫ್ ದಿವ್ಯ ಸಂದೇಶ ನೀಡುವರು. ನವೀಕೃತ ಕೊಠಡಿಗಳನ್ನು ವಿಧಾನ ಸಭೆ ಸ್ಪೀಕರ್ ಯು.ಟಿ.ಖಾದರ್, ಸಭಾ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕಟ್ಟಡವನ್ನು ಚೆನ್ನೈಯ ಉಷಾ ಫೈರ್ ಸೇಫ್ಟಿ ಆಂಡ್ ಇಕ್ವಿಪ್ಮೆಂಟ್ ಸಂಸ್ಥೆಯ ಆಡಳಿತ ನಿರ್ದೇಶಕ ಜಗದೀಶ ಅಡಪ ಕಡ್ವಾಯಿ, ಮಿನಿ ಸಭಾಂಗಣವನ್ನು ಸರ್ವಂ ಸೇಫ್ಟಿ ಇಕ್ವಿಪ್ಮೆಂಟ್ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರವೀಣ್ ಶೆಟ್ಟಿ ಕಡ್ವಾಯಿ, ಶಿಕ್ಷಕರ ಕೊಠಡಿಯನ್ನು ಪ್ಲಾಂಟ್ ಟೆಕ್ ಇಂಡಸ್ಟ್ರಿಯಲ್ ಸರ್ವಿಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಭಯ್ ಟಾರ್ಟ್, ತರಗತಿ ಕೊಠಡಿಗಳನ್ನು ಫಿಕ್ಸೆಲ್ ಸಾಫ್ಟೆಕ್ ಸಂಸ್ಥೆಯ ಆಡಳಿತ ನಿರ್ದೇಶಕ ಪಿ.ವಿ.ರೈ ಉದ್ಘಾಟಿಸುವರು. ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಕೆ.ಆರ್. ಅಧ್ಯಕ್ಷತೆ ವಹಿಸುವರು. ವಿಶೇಷ ಆಹ್ವಾನಿತರಾಗಿ ಚಲನಚಿತ್ರ ನಿರ್ದೇಶಕ ವಿಜಯಕುಮಾರ್ ಕೊಡಿಯಾಲಬೈಲು, ನಿರ್ಮಾಪಕ ಕಿಶೋರ್ ಡಿ.ಶೆಟ್ಟಿ, ನಟಿ ನವ್ಯ ಪೂಜಾರಿ, ನಟರಾದ ಅನುಪ್ ಸಾಗರ್, ಅರ್ಜುನ್ ಕಾಪಿಕಾಡ್, ಮಂಜು ರೈ ಮೂಳೂರು, ಪುಳಿಮುಂಚಿ ಹಾಗೂ ರಾಪಟ ಚಿತ್ರತಂಡದವರು ಪಾಲ್ಗೊಳ್ಳುವರು. ಹಲವು ಮಂದಿ ಗೌರವಾನ್ವಿತ ಅತಿಥಿಗಳೊಂದಿಗೆ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಕೆ.ಆರ್., ಶ್ರೀ ಭಾರತೀ ಎಜುಕೇಶನ್ ಟ್ರಸ್ಟ್ ಸಂಚಾಲಕ ಕೆ.ಸುಬ್ರಹ್ಮಣ್ಯ ಭಟ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಶ್ಚಲ್ ಜಿ.ಶೆಟ್ಟಿ, ಸಮಿತಿ ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಮಹಮ್ಮದ್ ಅಸ್ಗರ್, ಕೋಶಾಧಿಕಾರಿ ಕೆ.ರಾಮಕೃಷ್ಣ ಭಟ್, ಉಪಾಧ್ಯಕ್ಷರಾದ ಡಾ.ಅರುಣ್ ಪ್ರಸಾದ್, ನವೀನ ಡಿಸೋಜ, ಅನ್ನಪೂರ್ಣೇಶ್ವರಿ ಕಿಲಾರಿ ಪ್ರಕಟಣೆ ತಿಳಿಸಿದೆ.

75 ವರ್ಷಗಳ ಭವ್ಯ ಇತಿಹಾಸ…

ಮುಡಿಪು ಭಾರತೀ ಶಾಲೆಯು 1948ರಲ್ಲಿ ಸ್ಥಾಪನೆಯಾಗಿದ್ದು, ಆರಂಭದಲ್ಲಿ ಪ್ರಾಥಮಿಕ ಶಾಲೆಯಾಗಿತ್ತು. ಪ್ರಸ್ತುತ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದ ಬೋಧನೆ ಹೊಂದಿದ್ದು, 10ನೇ ತರಗತಿ ವರೆಗೆ ತರಗತಿಗಳು ನಡೆಯುತ್ತಿವೆ. ಐದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಅಮೃತ ಮಹೋತ್ಸವ ಅಂಗವಾಗಿ ಕಳೆದ 2022 ಆ.15ರಂದು ಹಳೆ ವಿದ್ಯಾರ್ಥಿ ಸಂಘ ರಚಿಸಿ ಬಳಿಕ ಅಮೃತಮಹೋತ್ಸವ ಸಮಿತಿಯನ್ನೂ ರಚಿಸಿ ವರ್ಷಪೂರ್ತಿ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸರಣಿ ಕಾರ್ಯಕ್ರಮಗಳಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳು, ಇಲ್ಲಿ ದುಡಿದ ಶಿಕ್ಷಕರು ಹಾಗೂ ಸಮಾಜದ ವಿವಿಧ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗಿದೆ. ಕಳೆದ ಒಂದು ವರ್ಷದಲ್ಲಿ ಸ್ವಚ್ಛಾಮೃತ 2022, ಸ್ನೇಹಮಿಲನ, ಅಮೃತ ಮಹೋತ್ಸವ ಕಟ್ಟಡ ಶಿಲಾನ್ಯಾಸ, ಪ್ರಾಣ ರಕ್ಷಣಾ ಕೌಶಲ್ಯ ತರಬೇತಿ, ವಿಶ್ವ ಮಹಿಳಾ ದಿನಾಚರಣೆ, ಆಟಿದ ಅರಗಣೆ, ‘ಅಕ್ಷರಾಮೃತ ಉಣಿಸಿ ಹರಸಿದ ಶಿಕ್ಷಕರಿಗೆ ಕೋಟಿ ನಮನ’ ಹೆಸರಿನ ಗುರುವಂದನೆ ಹಾಗೂ ಮೆಸ್ಕಾಂ ಸಿಬ್ಬಂದಿಗೆ ಸನ್ಮಾನ, ಸ್ವಚ್ಛತಾ ಸಿಬ್ಬಂದಿಗೆ ಸನ್ಮಾನ, ನ.1ರಂದು ರಾಜ್ಯೋತ್ಸವದಂದು ವಿಶಿಷ್ಟ ಮೆರವಣಿಗೆ, ನ.5ರಂದು ಕ್ರೀಡಾಮೃತ ಸಮಾರಂಭಗಳು ನಡೆದಿವೆ. ಅಮೃತ ಮಹೋತ್ಸವದ ನೆನಪಿಗೆ ಹಳೆ ವಿದ್ಯಾರ್ಥಿಗಳು ಹಾಗೂ ದಾನಿಗಳ ನೆರವಿನೊಂದಿಗೆ 75 ಲಕ್ಷ ರು. ವೆಚ್ಚದಲ್ಲಿ ಅಮೃತ ಭಾರತಿ ಹೆಸರಿನ ಕಟ್ಟಡ ನಿರ್ಮಾಣವಾಗಿದೆ. ನೂತನ ಪ್ರವೇಶದ್ವಾರ, ಗ್ರಂಥಾಲಯ, ಹಳೆ ಕಟ್ಟಡದ ನವೀಕರಣ, ಜಾರುಬಂಡೆಯ ನವೀಕರಣ, ಶಾಲಾ ಕೈತೋಟ, ತೆಂಗು-ಕಂಗುಗಳ ತೋಟ, ಆಟದ ಮೈದಾನ ನವೀಕರಣ, ದ್ವಿಪಥ ರಸ್ತೆ ನಿರ್ಮಾಣ ಮತ್ತಿತರ ಅಬಿವೃದ್ಧಿ ಕಾಮಗಾರಿಗಳು ನಡೆದಿವೆ. ಶಾಲೆಯ ವಿದ್ಯಾರ್ಥಿಗಳ ದಾಖಲಾತಿ ರಿಜಿಸ್ಟರ್ ಆಧರಿಸಿ ಸುಮಾರು 5 ಸಾವಿರ ವಿದ್ಯಾರ್ಥಿಗಳ ಹೆಸರುಗಳನ್ನು ಕಂಪ್ಯೂಟರ್ ಗೆ ಅಪ್ಲೋಡ್ ಮಾಡಲಾಗಿದೆ. ಶಾಲಾವರಣದಲ್ಲಿ ಅಮೃತ ಮಹೋತ್ಸವ ಸಂಭ್ರಮದ ಪ್ರಯುಕ್ತ ಭಾರತಿ ಪ್ಲಾಟಿನಂ ಫೆಸ್ಟ್ ಹೆಸರಿನಲ್ಲಿ ಒಂದು ತಿಂಗಳ ಕಾಲ ವೈವಿಧ್ಯಮಯ ವಸ್ತುಪ್ರದರ್ಶನ ಏರ್ಪಡಿಸಲಾಗಿದ್ದು, ನ.5ರಂದು ಉದ್ಘಾಟನೆಗೊಂಡಿದೆ.

Leave a Reply