ಮಡಿಕೇರಿ: ಮನೆಯಲ್ಲಿ ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಮಾಜಿ ಸೈನಿಕ, ನಗರದ ಉಕ್ಕುಡ ನಿವಾಸಿ ಸಂದೇಶ್ (38) ಅವರ ಮೃತದೇಹ ಸಮೀಪದ ಪಂಪಿನ ಕೆರೆಯಲ್ಲಿ ಪತ್ತೆಯಾಗಿದೆ. ಒಟ್ಟು ಪ್ರಕರಣದ ಕುರಿತು ತನಿಖೆ ನಡೆಸಲು ವಿಶೇಷ ತಂಡ ರಚಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.
ರಾಮರಾಜನ್ ತಿಳಿಸಿದ್ದಾರೆ.
ಮಂಗಳವಾರ ಅವರು ನಾಪತ್ತೆಯಾಗಿದ್ದು, ಮನೆಯಲ್ಲಿ ಡೆತ್‌ನೋಟ್ ಮತ್ತು ಕೆರೆಯ ದಂಡೆಯಲ್ಲಿ ಅವರ ಚಪ್ಪಲಿ ಮತ್ತು ವಾಚ್ ಪತ್ತೆಯಾದ ಹಿನ್ನೆಲೆಯಲ್ಲಿ ಅಗ್ನಿ ಶಾಮಕ ದಳ ಹಾಗೂ ಪೊಲೀಸರು ಶೋಧ ನಡೆಸಿದ್ದರು. ಸ್ಥಳೀಯ ಮುಳುಗುತಜ್ಞರು ಶೋಧ ನಡೆಸಿದರೂ ಸುಳಿವು ಲಭಿಸದ ಕಾರಣ ಈಶ್ವರ್ ಮಲ್ಪೆ ಅವರನ್ನು ಕರೆಸಲಾಯಿತು. ಬುಧವಾರ ರಾತ್ರಿ ಸುಮಾರು 8.30ರ ವೇಳೆಗೆ ಅವರು ಮೃತದೇಹವನ್ನು ಮೇಲೆತ್ತುವಲ್ಲಿ ಯಶಸ್ವಿಯಾದರು.
ಹನಿಟ್ರ್ಯಾಪ್ ಆರೋಪ: ಸಂದೇಶ್ ಡೆತ್‌ನೋಟ್‌ನಲ್ಲಿ ಮಹಿಳೆಯೊಬ್ಬರ ಹೆಸರು ಉಲ್ಲೇಖೀಸಿ ಆಕೆ ಹನಿಟ್ರ್ಯಾಪ್ ಮಾಡಿ ನನ್ನನ್ನು ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಆಕೆಯ ತಾಯಿ ಹಾಗೂ ತಂಗಿ ಕೂಡ ಶಾಮೀಲಾಗಿದ್ದಾರೆ. ಮಹಿಳೆಯ ಪರಿಚಯಸ್ಥರು ಕೂಡ ನನಗೆ ಕಿರುಕುಳ ನೀಡಿದ್ದಾರೆ ಎಂದು ಬರೆದುಕೊಂಡಿದ್ದಾರೆೆ. ಪೊಲೀಸ್ ಸಿಬಂದಿ ಹಾಗೂ ರೆಸಾರ್ಟ್ ಮಾಲಕರೊಬ್ಬರ ಹೆಸರನ್ನೂ ಉಲ್ಲೇಖೀಸಿದ್ದಾರೆ.