
ನಾಲ್ವರಿಂದ ಹತ್ಯೆಗೆ ಒಳಗಾದ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೂಡ ಅಪರಾಧ ಹಿನ್ನೆಲೆ ಉಳ್ಳವರಾಗಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಹೇಳಿದ್ದಾರೆ.ಗುರುವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು ಒಂದೇ ಊರಿನವರಾಗಿದ್ದ ಅಕ್ಷಯ್ ಮತ್ತು ಆರೋಪಿಗಳಾದ ಮನೀಷ್, ಚೇತನ್, ಮಂಜ ಮತ್ತು ಕೇಶವ ನಡುವೆ ಅಪಘಾತವೊಂದಕ್ಕೆ ಸಂಬಂಧಿಸಿ ನಡೆದ ವಾಗ್ವಾದ ತಾರಕಕ್ಕೇರಿ ಕೊಲೆ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.



‘ಅಕ್ಷಯ್ ಮೇಲೆ ಹಳೆಯ ಪ್ರಕರಣಗಳು ಇವೆ. ಮನಿಷ್ ಮತ್ತು ಚೇತನ್ ಕೂಡ ಅಪರಾಧ ಹಿನ್ನೆಲೆ ಉಳ್ಳವರು. ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿಗೆ ಚಿಕಿತ್ಸೆ ನೀಡಿದ ನಂತರ ವಾಗ್ವಾದ ಆಗಿತ್ತು. ಎಲ್ಲರೂ ಮದ್ಯ ಸೇವಿಸಲು ಸೇರುತ್ತಿದ್ದ ಜಾಗದಲ್ಲೇ ಕೊಲೆ ಮಾಡಲಾಗಿದೆ. ಅಕ್ಷಯ್ ಮತ್ತು ಆರೋಪಿಗಳ ಪರಿಚಯ ಇರುವ ಕಂಡಕ್ಟರ್ ಒಬ್ಬರು ಅಪಘಾತ ಆದ ಸ್ಥಳದಲ್ಲಿದ್ದರು. ಅವರು ಡಿಕ್ಕಿ ಹೊಡೆದ ಬೈಕ್ ಸವಾರನ ಗೆಳೆಯರಾದ ಮನೀಶ್ ಮತ್ತು ಚೇತನ್‌ಗೆ ಕರೆಮಾಡುತ್ತಿದ್ದಾಗ ಅಕ್ಷಯ್ ಫೋನ್ ಕಿತ್ತುಕೊಂಡು ಮಾತನಾಡಿದ್ದರು ಎಂದು ತಿಳಿದು ಬಂದಿದೆ’ ಎಂದು ರಿಷ್ಯಂತ್ ವಿವರಿಸಿದರು.
‘ಕೊಲೆಯಾದ ಅಕ್ಷಯ್ ಮತ್ತು ಆರೋಪಿಗಳು ಒಂದೇ ಊರಿನವರು. ಜೊತೆಯಾಗಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದವರು. ಘಟನೆಯ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕುತ್ತಿದ್ದು ಕೊಲೆ ಪ್ರಕರಣಕ್ಕೆ ಬೇರೇನಾದರೂ ಆಯಾಮ ಇದೆಯೇ ಎಂದು ಪರಿಶೀಲಿಸಲಾಗುತ್ತಿದೆ’ ಎಂದು ಅವರು ಹೇಳಿದರು.