Visitors have accessed this post 526 times.
ಬೆಳ್ತಂಗಡಿ: ತುರ್ತು ಸೇವೆಗಳ ಉಪಯೋಗಕ್ಕೆ ಇರುವ ಆ್ಯಂಬುಲೆನ್ಸ್ ವಾಹನವನ್ನು ಇಲ್ಲೊಬ್ಬ ವ್ಯಕ್ತಿ ಪ್ರವಾಸಕ್ಕೆ ಬಳಸಿಕೊಂಡ ಪರಿಣಾಮ ಸಂಚಾರಿ ಪೊಲೀಸರಿಂದ ದಂಡ ಹಾಕಿಸಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಉಜಿರೆ ಎಂಬಲ್ಲಿ ನಡೆದಿದೆ.
ಚಾಲಕ ತ್ಯಾಗರಾಜ್ ಎಂದು ಗುರುತಿಸಲಾಗಿದೆ. ಚಾಲಕ ತ್ಯಾಗರಾಜ್ ತನ್ನ ಆರು ಮಂದಿ ಗೆಳೆಯರನ್ನು ಆ್ಯಂಬುಲೆನ್ಸ್ನಲ್ಲಿ ಬೆಂಗಳೂರಿನಿಂದ ಧರ್ಮಸ್ಥಳ, ಉಡುಪಿ ದೇವಸ್ಥಾನಕ್ಕೆ ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ.
ಹೀಗೆ ಇವರು ತಮ್ಮ ತಿರುಗಾಟವನ್ನು ಮುಂದುವರೆಸುತ್ತ ಕೊಟ್ಟಿಗೆಹಾರ ಆಗಿ ಉಜಿರೆಗೆ ಬರುತ್ತಿರುವ ಮಾಹಿತಿ ಬೆಳ್ತಂಗಡಿ ಸಂಚಾರಿ ಪೊಲೀಸರ ಲಭಿಸಿದ್ದು, ವಾಹನವನ್ನು ಅಡ್ಡ ಹಾಕಿ ವಶಕ್ಕೆ ಪಡೆದುಕೊಂಡಿದ್ದಾರೆ.
ಆ್ಯಂಬುಲೆನ್ಸ್ ನ್ನು ಠಾಣೆಗೆ ತಂದು ವಿಚಾರಿಸಿದಾಗ ಗೆಳೆಯರ ಜೊತೆ ದೇವಸ್ಥಾನ ಟ್ರಿಪ್ ಹೊರಟ್ಟಿದ್ದೆ ಎಂದು ಚಾಲಕ ಮಾಹಿತಿ ನೀಡಿದ್ದಾನೆ. ಈ ವೇಳೆ ಚಾಲಕನಿಗೆ ದಂಡ ಹಾಕಿದ ಸಂಚಾರಿ ಪೊಲೀಸರು ಮುನ್ನೆಚ್ಚರಿಕೆ ನೀಡಿ ಕಳುಹಿಸಿಕೊಟ್ಟಿದ್ದಾರೆ.