ಉಡುಪಿ :ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರುವಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವು ಜಿಲ್ಲೆಯಾದ್ಯಂತ ಭಯದ ವಾತಾವರಣ ಸೃಷ್ಟಿಸಿದೆ.
ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಹಂತಕನ ಪತ್ತೆಗಾಗಿ 5 ತಂಡಗಳನ್ನು ರಚಿಸಲಾಗಿದೆ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುವುದಾಗಿ ಎಸ್ಪಿ ಡಾ. ಅರುಣ್ ಹೇಳಿದ್ದಾರೆ.
ಪೊಲೀಸರು ಸಂತೆಕಟ್ಟೆ, ಕರಾವಳಿ ಜಂಕ್ಷನ್ ಗಳ ಸಿಸಿಟಿವಿ ಫೂಟೇಜ್ ಕಲೆ ಹಾಕುತ್ತಿದ್ದಾರೆ. ಆರೋಪಿಯನ್ನು ಮನೆಗೆ ಬಿಟ್ಟು ಬಂದ ಆಟೋ ಚಾಲಕನಿಂದಲೂ ಮಾಹಿತಿ ಸಂಗ್ರಹ ಮಾಡಲಾಗಿದೆ. ಶೀಘ್ರ ಆರೋಪಿಯನ್ನು ಪತ್ತೆ ಹಚ್ಚುವ ವಿಶ್ವಾಸ ಉಡುಪಿ ಎಸ್ಪಿ ವ್ಯಕ್ತಪಡಿಸಿದರು.
ಅಂತ್ಯಕ್ರಿಯೆಉಡುಪಿ ನಗರದ ಎರಡು ಮಸೀದಿಗಳಲ್ಲಿ ನಾಲ್ಕು ಶವಗಳ ಪ್ರತ್ಯೇಕ ವಿಧಿ ವಿಧಾನಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಯಿತು.
ಸೌದಿ ಅರೇಬಿಯಾದಲ್ಲಿದ್ದ ಮೃತ ಹಸೀನಾ ಪತಿ ನೂರ್ ಮೊಹಮ್ಮದ್ ಅಂತ್ಯಸಂಸ್ಕಾರಕ್ಕೆ ಆಗಮಿಸಿದ್ದು, ಉಡುಪಿಯ ಜಾಮೀಯ ಮಸೀದಿಗೆ ಆಗಮಿಸಿದರು.
ಮುಸ್ಲಿಂ ಒಕ್ಕೂಟಗಳ ಖಂಡನೆಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಒಕ್ಕೂಟಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಜಿಲ್ಲಾ ಮುಸ್ಲಿಂ ಜಮಾಅತ್:ನೇಜಾರುನಲ್ಲಿ ನಡೆದ ಅಮಾನವೀಯ ಘಟನೆಯು ಮನುಷ್ಯ ಸಮಾಜವನ್ನು ನಾಚಿಸುವ ಕೃತ್ಯವಾಗಿದ್ದು ಇದರ ಬಗ್ಗೆ ಅತೀ ಶೀಘ್ರವಾಗಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಮತ್ತು ಆರೋಪಿಗಳನ್ನು ಬಂಧಿಸಿ ತಕ್ಕ ಶಿಕ್ಷೆ ನೀಡಬೇಕು ಹಾಗೂ ಯಾವುದೇ ವಕೀಲರು ಇಂತಹ ದುಷ್ಕರ್ಮಿಗಳ ಪರವಾಗಿ ವಾದಿಸಬಾರದಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾಧ್ಯಕ್ಷ ಬಿಎಸ್ಎಫ್ ರಫೀಕ್ ಹಾಗೂ ಪ್ರಧಾನ ಕಾರ್ಯದರ್ಶಿ ಎಚ್. ಸುಭಾನ್ ಅಹ್ಮದ್ ಹೊನ್ನಾಳ ಆಗ್ರಹಿಸಿದ್ದಾರೆ.
ಸಾಲಿಡಾರಿಟಿ ಉಡುಪಿ : ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದ್ದು,ಹಾಡಹಗಲೇ ಈ ಕೃತ್ಯ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಪೊಲೀಸ್ ಇಲಾಖೆ ಈ ಕೃತ್ಯ ಎಸಗಿದ ದುಷ್ಕರ್ಮಿಯ ನ್ನು ಶೀಘ್ರ ಬಂಧಿಸಿ ಕುಟುಂಬಸ್ಥರಿಗೆ ನ್ಯಾಯ ದೊರಕಿಸಿಕೊಡ ಬೇಕೆಂದು ಸಾಲಿಡಾರಿಟಿ ಯೂತ್’ ಮೂಮ್ಮೆಂಟ್ ಉಡುಪಿ ಜಿಲ್ಲಾಧ್ಯಕ್ಷ ನಬೀರ್ ಗುಜ್ಜರ್ ಬೆಟ್ಟು ಆಗ್ರಹಿಸಿದ್ದಾರೆ.
ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ :ತಾಯಿ, ಆಕೆಯ ಇಬ್ಬರು ಹೆಣ್ಣು ಮಕ್ಕಳು ಹಾಗು ಒಬ್ಬ ಮಗನನ್ನು ಹಾಡಹಗಲಲ್ಲೇ ಅವರ ಮನೆಗೇ ನುಗ್ಗಿ ಕೇವಲ ಹತ್ತಿಪ್ಪತ್ತು ನಿಮಿಷಗಳಲ್ಲಿ ಕೊಂದು ಹಂತಕ ಆರಾಮವಾಗಿ ಪರಾರಿಯಾಗಿದ್ದಾನೆ. ಹತ್ಯಾಕಾಂಡ ನಡೆದು ಒಂದೂವರೆ ದಿನವಾಗಿದೆ. ಆದರೆ ಈವರೆಗೂ ಹಂತಕನ ಸುಳಿವು ಸಿಕ್ಕಿಲ್ಲ, ಬಂಧನ ಆಗಿಲ್ಲ. ಹಂತಕ ಕೊಲೆ ಮಡಿದ ಬಳಿಕ ಆತನನ್ನು ಕರೆದುಕೊಂಡು ಹೋಗಿದ್ದಾನೆ ಎನ್ನಲಾದ ಬೈಕ್ ಸವಾರನ ಬಗ್ಗೆಯೂ ಯಾವುದೇ ಸುಳಿವು ಈವರೆಗೆ ಸಿಕ್ಕಿರುವ ವರದಿಯಿಲ್ಲ. ಇದು ಜನರಲ್ಲಿ ಇನ್ನಷ್ಟು ಭೀತಿ ಸೃಷ್ಟಿಸಿದೆ. ಜೊತೆಗೆ ಜನರಲ್ಲಿ ನಾನಾ ಪ್ರಶ್ನೆಗಳನ್ನು ಸೃಷ್ಟಿಸಿದೆ. ಉಡುಪಿ ಪೊಲೀಸರು ಈ ದುರಂತದ ತನಿಖೆಯನ್ನು ಚುರುಕುಗೊಳಿಸಬೇಕು. ಅದಕ್ಕೆ ಬೇಕಾದ ಎಲ್ಲ ಕ್ರಮಗಳನ್ನು ಕೈಗೊಂಡು ನಿಷ್ಪಕ್ಷ ಹಾಗು ಕ್ಷಿಪ್ರ ತನಿಖೆ ನಡೆಸಿ ಹಂತಕ ಹಾಗು ಆತನ ಹಿಂದಿರುವ ಸೂತ್ರಧಾರಿಗಳನ್ನು ಆದಷ್ಟು ಶೀಘ್ರ ಬಂಧಿಸಿ ಕಾನೂನು ಪ್ರಕಾರ ಅತ್ಯಂತ ಗರಿಷ್ಟ ಶಿಕ್ಷೆ ಕೊಡಿಸಬೇಕು.
ಇನ್ನು ಇಷ್ಟು ದೊಡ್ಡ ಘಟನೆಯ ಬಗ್ಗೆ ರಾಜ್ಯ ಸರಕಾರ ಅತ್ಯಂತ ಸಂವೇದನಾರಹಿತವಾಗಿ ಹಾಗು ಬೇಜವಾಬ್ದಾರಿಯಿಂದ ನಡೆದುಕೊಂಡಿದೆ. ಘಟನೆ ನಡೆದು ನಲ್ವತ್ತು ಘಂಟೆಗಳಾದರೂ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ಕೊಟ್ಟಿಲ್ಲ ಕನಿಷ್ಠ ಒಂದು ಹೇಳಿಕೆಯನ್ನೂ ಬಿಡುಗಡೆ ಮಾಡಿಲ್ಲ. ಜನರಿಂದ ವ್ಯಾಪಕ ಅಸಮಾಧಾನ ವ್ಯಕ್ತವಾಗಿ, ಮಾಧ್ಯಮಗಳಲ್ಲಿ ಸುದ್ದಿಯಾದ ಮೇಲೆಯೇ ಉಸ್ತುವಾರಿ ಸಚಿವರು ಪೊಲೀಸರಿಗೆ ಮಾತನಾಡಿ ಸೂಚನೆ ನೀಡಿದ್ದಾರೆ ಎಂಬ ಹೇಳಿಕೆ ಬಂದಿದೆ. ಉಸ್ತುವಾರಿ ಸಚಿವರೂ ಓರ್ವ ಮಹಿಳೆ ಹಾಗು ತಾಯಿ, ಅವರಿಂದ ಉಡುಪಿಯ ಜನ ಇಂತಹ ಸಂವೇದನಾರಹಿತ ವರ್ತನೆಯನ್ನು ನಿರೀಕ್ಷಿಸಿರಲಿಲ್ಲ. ಇದು ಜಿಲ್ಲೆಯ ಜನರಿಗೆ ತೀವ್ರ ನಿರಾಶಿ ತಂದಿದೆ ಎಂದು ಸೋಮವಾರ ಸಂಜೆ ನಡೆದ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಹೊಣೆಗಾರರ ತುರ್ತು ಸಭೆಯಲ್ಲಿ ಚರ್ಚಿಸಿದ ಬಳಿಕ ನೀಡಿರುವ ಪ್ರಕಟಣೆ ತಿಳಿಸಿದೆ.