ಮಂಗಳೂರು : ಆಟೋ ರಿಕ್ಷಾ ಚಾಲಕನಿಗೆ ಹಲ್ಲೆಗೈದು ಪರಾರಿಯಾಗಿದ್ದ ಮತ್ತೊಬ್ಬ ಆಟೋ ರಿಕ್ಷಾ ಚಾಲಕನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ರೋಕೇಶ್(37) ಯಾನೆ ಸೈಕೋ ರೋಸ್ ಎಂದು ಗುರುತಿಸಲಾಗಿದೆ.
ಈತ ಕುಂಪಲದ ಬೈಪಾಸ್ ಆಟೋ ರಿಕ್ಷಾ ಪಾರ್ಕಿನಲ್ಲಿ ರಿಕ್ಷಾ ಚಾಲಕರಾಗಿದ್ದು, ಅದೇ ಸ್ಟ್ಯಾಂಡ್ ನಲ್ಲಿದ್ದ ಮತ್ತೊಬ್ಬ ರಿಕ್ಷಾಚಾಲಕ ಸುಶಾಂತ್(31) ಎಂಬವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ. ಆದಿತ್ಯವಾರ ಆರೋಪಿ ರೋಕೇಶ್ ಯಾನೆ ಸೈಕೋ ರೋಸ್ ಸುಶಾಂತ್ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮುಖಕ್ಕೆ ಬಲವಾಗಿ ಗುದ್ದಿ ಹಲ್ಲೆ ಮಾಡಿದ್ದಾರೆ. ಇದರಿಂದಾಗಿ ಸುಶಾಂತ್ ಅವರ ಎರಡು ಹಲ್ಲು ಉದುರಿ ಹೋಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಬಳಿಕ ಅವರು ಸಹೋದ್ಯೋಗಿ ರೋಕೇಶ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಠಾಣೆಯಲ್ಲಿ ತನ್ನ ವಿರುದ್ದ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಲೆಮರೆಸಿಕೊಂಡಿದ್ದ ಆರೋಪಿ ರೋಕೇಶ್ ನನ್ನು ಉಳ್ಳಾಲ ಪೊಲೀಸ್ ಠಾಣೆಯ ಪಿಐ ಬಾಲಕೃಷ್ಣ ಅವರು ಸಿಬ್ಬಂದಿಗಳೊಂದಿಗೆ ಪತ್ತೆ ಹಚ್ಚಿ ಬಂಧಿಸಿದ್ದಾರೆ.