ಗಾಜಾದ ಮಕ್ಕಳ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಹಮಾಸ್‌ ಉಗ್ರರ ಸುರಂಗ

ಜೆರುಸಲೇಂ: ಇಸ್ರೇಲ್‌ ಮೇಲೆ ದಾಳಿ ನಡೆಸಿದ ಬಳಿಕ ಹಮಾಸ್‌ ಉಗ್ರರು ಇಸ್ರೇಲಿ ಪ್ರಜೆಗಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದ ದೊಡ್ಡ ಸುರಂಗವೊಂದು ಗಾಜಾದ ಆಸ್ಪತ್ರೆಯಡಿ ಪತ್ತೆಯಾಗಿದೆ. ಈ ಸುರಂಗದ ವಿಡಿಯೋವನ್ನು ಇಸ್ರೇಲಿ ಸೇನೆ ಇಂದು ಬಿಡುಗಡೆ ಮಾಡುವ ಮೂಲಕ ಹಮಾಸ್‌ ಉಗ್ರರ ಕೃತ್ಯವನ್ನು ಬಹಿರಂಗ ಪಡಿಸಿದೆ.

ಇಸ್ರೇಲ್‌ ಸೇನೆ ಆಸ್ಪತ್ರೆಯ ಮೇಲೆ ಏರ್‌ ಸ್ಟ್ರೈಕ್‌ ಮಾಡುವ ಮೂಲಕ ಮಗ್ದ ಮಕ್ಕಳನ್ನು ಹತ್ಯೆ ಮಾಡುತ್ತಿದೆ ಎಂದು ಹಮಾಸ್‌ ಹೇಳಿತ್ತು. ಆದರೆ ಇಸ್ರೇಲ್‌ ಈ ಆರೋಪವನ್ನು ತಳ್ಳಿ ಹಾಕಿ, ಹಮಾಸ್‌ ಉಗ್ರರು ಆಸ್ಪತ್ರೆಯನ್ನು ರಕ್ಷಣಾ ಕವಚವನ್ನಾಗಿ ಮಾಡುತ್ತಿದ್ದಾರೆ ಎಂದು ಹೇಳಿತ್ತು. ಈಗ ಸುರಂಗದ ವಿಡಿಯೋವನ್ನು ಇಸ್ರೇಲ್‌ ಬಿಡುಗಡೆ ಮಾಡುವ ಮೂಲಕ ಹಮಾಸ್‌ ಉಗ್ರರ ಬಣ್ಣವನ್ನು ಬಯಲು ಮಾಡಿದೆ.

ಗಾಜಾದಲ್ಲಿನ ರಾಂಟಿಸ್ಸಿ ಮಕ್ಕಳ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಹಮಾಸ್ ಸಂಗ್ರಹಿಸಿಟ್ಟಿರುವ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ಇಸ್ರೇಲ್‌ ಸೈನ್ಯದ ವಕ್ತಾರ ಹೇಳಿಕೊಳ್ಳುವ ವೀಡಿಯೊ ಮತ್ತು ಫೋಟೋಗಳನ್ನು ಇಸ್ರೇಲಿ ಮಿಲಿಟರಿ ರಿಲೀಸ್‌ ಮಾಡಿದೆ. ರಾಂಟಿಸ್ಸಿ ಆಸ್ಪತ್ರೆ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವ ವಿಶೇಷ ಮಕ್ಕಳ ಆಸ್ಪತ್ರೆಯಾಗಿದ್ದು ಇಲ್ಲಿ ಗ್ರೆನೇಡ್‌ಗಳು ಮತ್ತು ಇತರ ಸ್ಫೋಟಕಗಳು ಪತ್ತೆಯಾಗಿದೆ.

ಹಮಾಸ್ ಬಂದೂಕುಧಾರಿಗಳು ಅಕ್ಟೋಬರ್ 7ರಂದು ದಕ್ಷಿಣ ಇಸ್ರೇಲ್‌ಗೆ ನುಗ್ಗಿ ಸುಮಾರು 1,200 ಜನರನ್ನು ಹತ್ಯೆ ಮಾಡಿದ್ದರು. ನಂತರ 240 ಬಂಧಿತರನ್ನು ಗಾಜಾಕ್ಕೆ ತಂದು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದರು.

Leave a Reply