
ಮಂಗಳೂರು : ನೈತಿಕ ಪೊಲೀಸ್ ಗಿರಿ ಸೇರಿದಂತೆ ಇತರ ಪ್ರಕರಣದಲ್ಲಿ ಭಾಗಿಯಾಗಿದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತರ ವಿರುದ್ದ ಇದೀಗ ಪೊಲೀಸರು ಮತ್ತೆ ಗಡೀಪಾರು ಅಸ್ತ್ರ ಪ್ರಯೋಗ ಮಾಡಿದ್ದು, ದಕ್ಷಿಣಕನ್ನಡ ಜಿಲ್ಲೆಯ 5 ಮಂದಿ ಭಜರಂಗದಳ ಕಾರ್ಯಕರ್ತರಿಗೆ ಗಡಿಪಾರು ನೋಟೀಸ್ ನೀಡಲಾಗಿದೆ. ಭಜರಂಗದಳ ಕಾರ್ಯಕರ್ತರಾದ ಲತೇಶ್ ಗುಂಡ್ಯ, ಪ್ರಜ್ವಲ್, ನಿಶಾಂತ್, ಪ್ರದೀಪ್ ಮತ್ತು ದಿನೇಶ್ ಗೆ ಅವರಿಗೆ ಗಡಿಪಾರು ಮಾಡುವ ಕುರಿತಂತೆ ಕಾರಣ ಕೇಳಿ ಪೊಲೀಸ್ ಇಲಾಖೆ ನೋಟೀಸ್ ಜಾರಿ ಮಾಡಿದೆ. ಭಜರಂಗದಳದಲ್ಲಿ ಪುತ್ತೂರು ತಾಲೂಕು ಜವಾಬ್ದಾರಿ ಹೊಂದಿರೋ ದಿನೇಶ್, ಪ್ರಜ್ವಲ್, ಭಜರಂಗದಳ ಪುತ್ತೂರು ಜಿಲ್ಲಾ ಸಹ ಸಂಯೋಜಕ್ ಆಗಿರೋ ಲತೇಶ್ ಗುಂಡ್ಯ ಹಾಗೂ ಭಜರಂಗದಳ ಕಾರ್ಯಕರ್ತರಾದ ನಿಶಾಂತ್, ಪ್ರದೀಪ್ ಮತ್ತು ದಿನೇಶ್ ಗೆ ನೋಟೀಸ್ ನೀಡಲಾಗಿದೆ. ಎಲ್ಲರಿಗೂ ನವೆಂಬರ್ 22 ರಂದು ಪುತ್ತೂರು ಸಹಾಯಕ ಆಯುಕ್ತರ ಎದುರು ಹಾಜರಾಗಲು ಸೂಚನೆ ನೀಡಲಾಗಿದೆ. ಈ ಐವರಲ್ಲಿ ಲತೇಶ್ ಹೊರತುಪಡಿಸಿ ಉಳಿದ ನಾಲ್ವರ ಮೇಲೆ ಒಂದೊಂದು ಪ್ರಕರಣಗಳಿದ್ದು, ಕೋಮು ಗಲಭೆ, ದನಸಾಗಾಟ ಹಲ್ಲೆ, ನೈತಿಕ ಪೊಲೀಸ್ ಗಿರಿ ಸೇರಿ ಪ್ರಕರಣಗಳಲ್ಲಿ ಭಾಗಿ ಆರೋಪ ಇದೆ. ಈ ಹಿನ್ನಲೆ ಪುತ್ತೂರು ನಗರ ಠಾಣೆ ಹಾಗೂ ಸುಳ್ಯ ಠಾಣೆಯಿಂದ ಐವರ ಗಡೀಪಾರಿಗೆ ಮನವಿ ಮಾಡಲಾಗಿದೆ. ಕರ್ನಾಟಕ ಪೊಲೀಸ್ ಅಧಿನಿಯಮ 1953ರ ಕಲಂ 55ರಡಿ ಎಲ್ಲರಿಗೂ ಗಡೀಪಾರು ನೋಟೀಸ್ ನೀಡಲಾಗಿದೆ. ಅದರಲ್ಲಿ ಲತೇಶ್ ಗೆ ಬಳ್ಳಾರಿ ಜಿಲ್ಲೆ , ಪ್ರಜ್ವಲ್ ಗೆ ಬಾಗಲಕೋಟೆ ಜಿಲ್ಲೆಗೆ ಗಡೀಪಾರು ಮಾಡಲು ಮನವಿ ಮಾಡಲಾಗಿದೆ.


