ಬೆಂಗಳೂರು : ಬೆಸ್ಕಾಂ ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಬಾಣಂತಿ ಹಾಗೂ ಮಗು ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ನಾಲ್ಕನೇ ಪೂರ್ವ ವಿಭಾಗ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಸುಬ್ರಮಣ್ಯ.ಟಿ, ಸಹಾಯಕ ಎಂಜಿನಿಯರ್ ಚೇತನ್ ಎಸ್, ಹಿರಿಯ ಎಂಜಿನಿಯರ್ ರಾಜಣ್ಣ, ಕಿರಿಯ ಪವರ್ ಮ್ಯಾನ್ ಮಂಜುನಾಥ್ ರೇವಣ್ಣ, ಲೈನ್ಮ್ಯಾನ್ ಬಸವರಾಜು ಎಂಬವರನ್ನು ಅಮಾನತು ಮಾಡಲಾಗಿದೆ.
ತಮಿಳುನಾಡು ಮೂಲದ ಇವರು ಕಾಡುಗೋಡಿಯ ಗೋಪಾಲ್ ಕಾಲೋನಿಯಲ್ಲಿ ವಾಸವಾಗಿದ್ದರು. ಭಾನುವಾರ ಬೆಳಗ್ಗಿನ ಜಾವ 5 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ.
ಬೆಂಗಳೂರಿನ ವೈಟ್ ಫೀಲ್ಡ್ ನ ಕಾಡುಗೋಡಿ ಬಳಿ ನಿನ್ನೆ ಮುಂಜಾನೆ 5 ಗಂಟೆ ಸುಮಾರಿಗೆ ತಾಯಿ ಹಾಗೂ ಮಗು ಕಟ್ ಆಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸಜೀವ ದಹನಗೊಂಡಿದ್ದರು. ಕಾಡುಗೋಡಿ ಬಳಿ ಮುಖ್ಯ ರಸ್ತೆಯ ಫುಟ್ ಪಾತ್ ಮೇಲೆಯೇ ಈ ದುರಂತ ಸಂಭವಿಸಿತ್ತು. ಘಟನೆಯಲ್ಲಿ ಮಹಿಳೆ ಸೌಂದರ್ಯ ಹಾಗೂ ಮಗು ಲೀಲಾ ಮೃತಪಟ್ಟಿದ್ದರೆ ಸೌಂದರ್ಯ ಪತಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.