Visitors have accessed this post 264 times.
ಹಳಸಿದ ಬಿರಿಯಾನಿ ತಿಂದ ಪರಿಣಾಮ 17 ಜನ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ಸೇರಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ,
ಜಿಲ್ಲೆಯ ಕಡೂರು ತಾಲೂಕಿನ ಮರವಂಜಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮನೆಯೊಂದರಲ್ಲಿ ಔತಣಕೂಟ ನಡೆದಿತ್ತು. ಕಾರ್ಯಕ್ರಮ ಮುಗಿದ ಬಳಿಕ ಸಂಬಂಧಿಕರಿಗಾಗಿ ಬಿರಿಯಾನಿ ತಯಾರಿಸಿದ್ದರು. ಭಾನುವಾರ ಮಾಡಿದ್ದ ಬಿರಿಯಾನಿಯನ್ನು ಸೋಮವಾರ ತಿಂದ 17 ಜನ ಗ್ರಾಮಸ್ಥರು ಅಸ್ವಸ್ಥರಾಗಿ ಕಡೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸೇವಿಸಿದ ಸ್ವಲ್ಪ ಹೊತ್ತಿನ ಬಳಿಕ ವಾಂತಿ-ಭೇದಿಯಿಂದ ಅಸ್ವಸ್ಥಗೊಂಡ ಹಿನ್ನೆಲೆ ಗ್ರಾಮಸ್ಥರು ಅಂಬುಲೆನ್ಸ್‌ನಲ್ಲಿ ಎಲ್ಲರನ್ನೂ ಕಡೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.ಭಾನುವಾರ ತಯಾರಿಸಿದ್ದ ಮಾಂಸಾಹಾರ ಸೋಮವಾರ ವಿಷಪೂರಿತಗೊಂಡಿದ್ದು, ಅದನ್ನೇ ಗ್ರಾಮಸ್ಥರು ಸೇವಿಸಿದ್ದರಿಂದ ವಾಂತಿ-ಭೇದಿ ಕಾಣಿಸಿಕೊಂಡಿದೆ. ಕೂಡಲೇ ಪ್ರಾಥಮಿಕ ಚಿಕಿತ್ಸೆ ನೀಡಿದ್ದರಿಂದ ಯಾರ ಪ್ರಾಣಕ್ಕೂ ತೊಂದರೆ ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಆಸ್ಪತ್ರೆಗೆ ದಾಖಲಾದ ಗ್ರಾಮಸ್ಥರ ಪೈಕಿ 8 ಪುರುಷರು ಹಾಗೂ 9 ಮಹಿಳೆಯರು ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ವಿಷಯ ತಿಳಿದು ಕಡೂರು ಶಾಸಕ ಕೆಎಸ್ ಆನಂದ್ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥಗೊಂಡವರ ಯೋಗಕ್ಷೇಮ ವಿಚಾರಿಸಿದ್ದಾರೆ.