ಉಡುಪಿ: ನೇಜಾರು ಹತ್ಯೆ ಪ್ರಕರಣ: ಆರೋಪಿ ಪ್ರವೀಣ್ ಚೌಗುಲೆಗೆ ಡಿ.5 ರವರೆಗ ನ್ಯಾಯಾಂಗ ಬಂಧನ

ಉಡುಪಿ :ನೇಜಾರುವಿನಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿ ಪ್ರವೀಣ್ ಅರುಣ್ ಚೌಗುಲೆ(39)ಯನ್ನು ಉಡುಪಿ ಪೊಲೀಸರು ಇಂದು ಪ್ರಧಾನ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯ ಆರೋಪಿಯನ್ನು ಡಿ.5 ರವರಗೆ  14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ.

ಬಂಧಿತ ಆರೋಪಿ ಪ್ರವೀಣ್ ನನ್ನು ನ.15ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಪೊಲೀಸರು, ಗಂಭೀರ ಪ್ರಕರಣದ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆಗಾಗಿ 14 ದಿನಗಳ ಕಾಲ ಪೊಲೀಸ್ ಕಸ್ಟಡಿ ಪಡೆದುಕೊಂಡಿದ್ದರು.

ಈ ವೇಳೆ ಆರೋಪಿಯನ್ನು ನ.28ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಪ್ರವೀಣ್ ನನ್ನು ಕಸ್ಟಡಿಗೆ ಪಡೆದಿದ್ದ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿ ಸ್ಥಳ ತನಿಖೆ, ಮಹಜರು, ಹೇಳಿಕೆ, ಆರೋಪಿ ಗುರುತು ಸೇರಿದಂತೆ ಎಲ್ಲ ರೀತಿಯ ತನಿಖೆ ಪ್ರಕ್ರಿಯೆಯನ್ನು ವಾರದೊಳಗೆ ಪೂರ್ಣಗೊಳಿಸಿದ್ದಾರೆ.

ಇದೀಗ ಆರೋಪಿಯನ್ನು ನ.28ರವರೆಗೆ ಕಸ್ಟಡಿಯಲ್ಲಿ ಇಟ್ಟುಕೊಳ್ಳುವ ಅಗತ್ಯ ಇಲ್ಲ ಎಂಬುದನ್ನು ಮನಗಂಡ ಪೊಲೀಸರು, ಇಂದು ಬಿಗಿ ಪೊಲೀಸ್ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಡಿ.5ರಂದು ಮತ್ತೆ ಆರೋಪಿಯನ್ನು ನ್ಯಾಯಕ್ಕೆ ಹಾಜರುಪಡಿಸುವಂತೆ ನ್ಯಾಯಾಧೀಶರು ಆದೇಶಿಸಿದರು.

Leave a Reply