Visitors have accessed this post 555 times.

ಕಾಲುದಾರಿಗೆ ಇಪ್ಪತ್ತು ಬಾರಿ ಸರ್ವೆ…ಶೇಣವಾ ಏನು ನಿನ್ನ ಗೋಳು…?

Visitors have accessed this post 555 times.

ಅತನದು ಭೂಮಿ ಮೇಲಿನ ವ್ಯಾಮೋಹವೋ ಅಥವಾ ಕಿರುಕುಳ ನೀಡಿ ಖುಷಿ ಪಡಬೇಕು ಅನ್ನೋ ಸ್ಯಾಡಿಸ್ಟ್​ ಮನೋಭಾವವೋ ಗೊತ್ತಿಲ್ಲ. ಆದ್ರೆ ಆ ವ್ಯಕ್ತಿಯೊಬ್ಬನಿಂದ ಊರಿನ ಜನರ ನೆಮ್ಮದಿ ಹಾಳಾಗಿರೋದು ಮಾತ್ರವಲ್ಲದೆ ಸರ್ಕಾರಿ ಅಧಿಕಾರಿಗಳೂ ಸುಸ್ತಾಗಿ ಹೋಗಿದ್ದಾರೆ. ಕೇವಲ ಒಂದುವರೆ ಫೀಟ್​ ಕಾಲು ದಾರಿಗಾಗಿ ಇಪ್ಪತ್ತು ಬಾರಿ ತನ್ನ ಜಮೀನು ಸರ್ವೆ ಮಾಡಿಸಿ ಸರ್ವೆ ಅಧಿಕಾರಿಗಳು ನೀಡಿದ ವರದಿಗೂ ತೃಪ್ತವಾಗದ ಅತೃಪ್ತ ಆತ.
ಉಳ್ಳಾಲ ತಾಲೂಕಿನ ಅಂಬ್ಲ ಮೊಗರು ಗ್ರಾಮದ ಪಾಡ್ಯರಮನೆ ಎಂಬಲ್ಲಿ ನಾಗೇಶ ಶೇಣವ ಎಂಬವರ ಐದು ಸೆಂಟ್ ಜಾಗವನ್ನ ಬೇರೆ ಬೇರೆ ಸರ್ವೆಯರ್​ಗಳು ಈಗಾಗಲೆ ಇಪ್ಪತ್ತುಬಾರಿ ಸರ್ವೆ ನಡೆಸಿ ವರದಿ ಕೊಟ್ಟಿದ್ದಾರೆ. ಆದ್ರೆ ಸರ್ವೆಗಾಗಿ ಅರ್ಜಿ ಸಲ್ಲಿಸೋ ಶೇಣವನಿಗೆ ಮಾತ್ರ ಯಾರೇ ಸರ್ವೆ ಮಾಡಿದ್ರೂ ಅದು ತನ್ನ ಪರವಾಗಿ ಬಂದಿಲ್ಲ ಅನ್ನೋ ಕಾರಣಕ್ಕೆ ಮತ್ತೆ ಮತ್ತೆ ಸರ್ವೆ ಮಾಡಿಸ್ತಾನೆ ಇದ್ದಾನೆ. ಈತನ ಈ ಸರ್ವೆ ಮಾಡಿಸೋ ಹುಚ್ಚಿಗೆ ಕಾರಣವಾಗಿರೋದು ಕೇವಲ ಒಂದುವರೆ ಅಡಿ ಅಗಲದ ಕಾಲು ದಾರಿ ಅನ್ನೋದೇ ವಿಪರ್ಯಾಸ. ಹೌದು ಶೇಣವನ ಮನೆಗೆ ಹೊಂದಿಕೊಂಡಂತೆ ಹಲವು ಮನೆಗಳಿದ್ದು, ಅವರು ಸಂಚರಿಸೋ ಕಾಲುದಾರಿ ಶೇಣವನ ಐದು ಸೆಂಟ್ಸ್​ ಜಾಗದ ಪಕ್ಕದಲ್ಲೇ ಅನಾದಿ ಕಾಲದಿಂದಲೂ ಹಾದು ಹೋಗುತ್ತದೆ.


ಈ ರಸ್ತೆಯನ್ನು ಬಂದ್ ಮಾಡಬೇಕು ಅಕ್ಕ ಪಕ್ಕದವರಿಗೆ ಕಿರುಕುಳ ಕೊಡಬೇಕು ಅನ್ನೋ ಒಂದೇ ಉದ್ದೇಶದಿಂದ ನಿರಂತರವಾಗಿ ಕಿರುಕುಳ ನೀಡುತ್ತಾ ಇದ್ದಾನೆ. ಜಾಗ ಸರ್ವೆ ಮಾಡಿಸಿದ್ರೂ ತೃಪ್ತಿಯಾಗದೆ ಅತೃಪ್ತ ಆತ್ಮದಂತೆ ಮತ್ತೆ ಮತ್ತೆ ಸರ್ವೆ ಮಾಡಿಸ್ತಾನೇ ಇದ್ದಾನೆ. ಅಸಲಿಗೆ ಈತ ಸದ್ಯ ವಾಸವಾಗಿರೋ ಮನೆಯ ಅಡಿ ಸ್ಥಳ ಈತನಿಗೆ ಚಾಲಗೇಣಿಯ ಹಕ್ಕಿನಿಂದ ಬಂದಿದ್ದೇ ಹೊರತು ಈತ ಖರೀದಿ ಮಾಡಿದ ಜಮೀನು ಅಲ್ಲ. ಇದೇ ರೀತಿಯಾಗಿ ಇಲ್ಲಿ ಹಲವಾರು ಜನರು ಚಾಲ ಗೇಣಿಯ ಹಕ್ಕಿನಿಂದಲೇ ಜಮೀನು ಪಡೆದು ಮನೆ ಕಟ್ಟಿಕೊಂಡವರೇ ಜಾಸ್ತಿ. ಆ ಕಾಲದಲ್ಲಿ ಕಾಲುದಾರಿಯ ಬಗ್ಗೆ ಯಾರೂ ತಲೆಕೆಡಿಕೊಳ್ಳದ ಕಾರಣ ಸರ್ಕಾರಿ ದಾಖಲೆಯಲ್ಲೂ ಕಾಲುದಾರಿಯ ಉಲ್ಲೇಖ ಇಲ್ಲ . ಹಾಗಂತ ಹಲವಾರು ವರ್ಷದಿಂದ ಬಳಸ್ತಾ ಇದ್ದ ಕಾಲುದಾರಿಗೆ ಸರ್ವೆ ಇಲಾಖೆಯ ಸರ್ವೆಯರ್ ಗಳನ್ನು ಬುಟ್ಟಿಗೆ ಹಾಕಿ ಅಕ್ಕಪಕ್ಕದ ಮನೆಯವರಿಗೆ ನೋಟಿಸ್ ನೀಡದೆ ಸರ್ವೆ ದಾಖಲೆಯಲ್ಲಿ ಪ್ಲಾಟಿಂಗ್ ಮಾಡಿ ಈಗ ಗಡಿ ಗುರುತಿಗೆ ಅರ್ಜಿ ಹಾಕಿಸಿ ಸಾರ್ವಜನಿಕ ದಾರಿಯನ್ನು ಮುಚ್ಚಲು ಹೊರಟು ಸರ್ವೆ ಇಲಾಖೆಯ ಉನ್ನತ ಅಧಿಕಾರಿಗಳನ್ನು ಯಾಮಾರಿಸುತ್ತಿದ್ದಾನೆ. ಹೀಗೆ ಶೇಣವ ಪ್ರಯತ್ನದ ಮೇಲೆ ಪ್ರಯತ್ನ ಪಡ್ತಾನೇ ಇರುವ ಕಾರಣ ಅದೆಷ್ಟೋ ಸರ್ವೆಯರ್​ ಬಂದು ಗಡಿ ಗುರುತು ಹಾಕಿದ್ರೂ ಈತನ ಉದ್ದೇಶ ಈಡೇರದ ಕಾರಣ ಈತನ ಸರ್ವೆ ಹುಚ್ಚು ಇನ್ನೂ ಕೂಡಾ ಬಿಟ್ಟಿಲ್ಲ. ಅಷ್ಟಕ್ಕೂ ಈತನ ಟಾರ್ಗೆಟ್​ ಆಗಿರೋದು ಕಾಲುದಾರಿ ಹಾದು ಹೋಗುವ ಪಕ್ಕದಲ್ಲಿ ನಿರ್ಮಾಣವಾದ ಮನೆ ಅನ್ನೋದು ಗ್ರಾಮದ ಎಲ್ಲರಿಗೂ ಗೊತ್ತಿರೋ ವಿಚಾರ. ಪಕ್ಕದ ಜಾಗದ ಆನಂದ ಪೂಜಾರಿ ಎಂಬವರು ತಮ್ಮ ಹಳೇ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಾಣ ಮಾಡಿದ ಬಳಿಕ ಈತನ ಹೊಟ್ಟೆಯಲ್ಲಿ ಅದೆಂತ ಹುಳ ಓಡಾಡ್ತಾ ಇದೆಯೋ ಗೊತ್ತಿಲ್ಲ. ಆ ಮನೆಗೆ ಇರೋ ದಾರಿಯನ್ನು ಬಂದ್ ಮಾಡಬೇಕು ಅದಕ್ಕಾಗಿ ಅದರಾಚೆಗೆ ಇರೋ ಹತ್ತು ಮನೆಗೆ ತೊಂದರೆ ಆದ್ರೂ ಅಡ್ಡಿ ಇಲ್ಲ ಅನ್ನೋ ತೀರ್ಮಾನಕ್ಕೆ ಬಂದಿದ್ದಾನೆ. ಸದ್ಯಕ್ಕಂತೂ ಈತನ ಆಸೆ ಈಡೇರೋ ಲಕ್ಷಣ ಇಲ್ಲದ ಕಾರಣ ಬೆಂಬಿಡದ ಬೇತಾಳನಂತೆ ಸರ್ವೆ ಇಲಾಖೆಯನ್ನು ಕಾಡುತ್ತಿದ್ದಾನೆ. ಇದೀಗ ಎಡಿಎಲ್​ ಆರ್​ ಮೂಲಕ ಸರ್ವೆ ಮಾಡಿಸಿ ಆತನ ಐದು ಸೆಂಟ್ಸ್​ ಜಾಗದ ಗಡಿ ಗುರುತು ಮಾಡಿದ್ರೂ ಆತನಿಗೆ ತೃಪ್ತಿಯಾಗಿಲ್ಲ. ತನ್ನ ಒಂದು ಕಣ್ಣು ಹೋದರೂ ಚಿಂತೆಯಿಲ್ಲ ಮತ್ತೊಬ್ಬನ ಎರಡೂ ಕಣ್ಣೂ ಹೋಗಬೇಕು ಅನ್ನೋ ಹಟ ಸಾಧನೆಗೆ ಇಳಿದು ಇದೀಗ ಇಡೀ ಗ್ರಾಮ ಜನರಿಗೆ ತೊಂದರೆ ಮಾಡುವ ರೀತಿ ಗ್ರಾಮ ಸರ್ವೆ ಮಾಡಿಸೊ ಪ್ಲ್ಯಾನ್​ ರೂಪಿಸಿದ್ದಾನೆ. ಈತನ ಈ ಸರ್ವೆ ಮಾಡಿಸೋ ಹುಚ್ಚಿಗೆ ಮುಂದೊಂದು ದಿನ ಗ್ರಾಮದ ಜನರು ಸಮಸ್ಯೆ ಎದುರಿಸೋ ಬದಲು ಊರ ಹಿರಿಯರು ಈತನಿಗೆ ಬುದ್ದಿ ಹೇಳೋದು ಒಳಿತು.

Leave a Reply

Your email address will not be published. Required fields are marked *