ಉಳ್ಳಾಲ: ಪೆರ್ಮನ್ನೂರು ಗ್ರಾಮದ ಸಂತೋಷನಗರ ಎಂಬಲ್ಲಿ ನಿಷೇದಿತ ಮಾದಕ ವಸ್ತು ಮೆಥಂಫೆಟಮೈನ್ ಮತ್ತು ಎಲ್.ಎಸ್.ಡಿ. ಸ್ಟಾಂಪ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿದ್ದ ಡ್ರಗ್ ಪೆಡ್ಲರ್ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆಶಿತ್ ಯಾನೆ ಅಶ್ವಿತ್ ಯಾನೆ ಆಶು ಬಂಧಿತ ಆರೋಪಿ. ಆರೋಪಿಯನ್ನು ಕೋಟೆಕಾರು ಗ್ರಾಮದ ಮಾಡೂರು ಸಾಯಿ ಮಂದಿರದ ಸಮೀಪದ ಗ್ರೌಂಡ್ ಬಳಿ ಪತ್ತೆ ಮಾಡಿದ್ದು, ಆತನಿಂದ 6 ಲಕ್ಷ ರೂಪಾಯಿ ಮೌಲ್ಯದ 100 ಗ್ರಾಂ ತೂಕದ ಎಂ.ಡಿ.ಎಂ.ಎ., 30,000 ರೂಪಾಯಿ ಮೌಲ್ಯದ 600 ಗ್ರಾಂ ಗಾಂಜಾ, 1 ಲಕ್ಷ ರೂಪಾಯಿ ಮೌಲ್ಯದ ಕೆಟಿಎಂ ಡ್ಯೂಕ್ ಮೋಟಾರು ಸೈಕಲ್ ಸೇರಿದಂತೆ ಒಟ್ಟು 7 ಲಕ್ಷದ 77 ಸಾವಿರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳ್ಳಾಲ ಠಾಣೆಯ ಪೊಲೀಸ್ ನಿರೀಕ್ಷಕ ಬಾಲಕೃಷ್ಣ. ಎಚ್.ಎನ್., ಪಿ.ಎಸ್.ಐ.ಗಳಾದ ಶೀತಲ್ ಅಲಗೂರ ಮತ್ತು ಸಂತೋಷ ಕುಮಾರ್.ಡಿ. ಹಾಗೂ ಮಂಗಳೂರು ದಕ್ಷಿಣ ಉಪ-ವಿಭಾಗದ ಎ.ಸಿ.ಪಿ. ನೇತೃತ್ವದ ಡ್ರಗ್ಸ್ ನಿಗ್ರಹ ದಳದ ಪಿ.ಎಸ್.ಐ. ಪುನಿತ್ ಗಾಂವ್ಕರ್ ಮತ್ತು ಸಿಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಡಿ. 4 ರಂದು ಆರೋಪಿಗಳಾದ ಶಿಶಿರ್ ದೇವಾಡಿಗ ಮತ್ತು ಶುಶಾನ್.ಎಲ್. ಅವರನ್ನು ಪೊಲೀಸರು ಬಂಧಿಸಿ ಅವರಿಂದ 132 ಗ್ರಾಂ ತೂಕದ ಮೆಥಂಫೆಟಮೈನ್ ಮತ್ತು 250 ಎಲ್.ಎಸ್.ಡಿ. ಸ್ಟ್ಯಾಂಪ್ ಡ್ರಗ್, ನಗದು 3,70,050 ರೂಪಾಯಿ ಹಾಗೂ ಒಂದು ಸ್ವಿಪ್ಟ್ ಕಾರು ಸೇರಿದಂತೆ ಒಟ್ಟು 14 ಲಕ್ಷದ ಒಂದು ಸಾವಿರದ ಐವತ್ತು ರೂಪಾಯಿ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಇದೀಗ ಅದರ ಮುಂದುವರಿದ ಭಾಗವಾಗಿ 3ನೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.